ಬೆಂಗಳೂರಿನಲ್ಲಿ ಸೋಮವಾರ ನಡೆದ ‘ಸಿಎಸ್‌ಆರ್ ಶಿಕ್ಷಣ ಸಮಾವೇಶ–2024’ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧುಬಂಗಾರಪ್ಪ(ಎಡದಿಂದ ಮೂರನೆಯವರು) ವೋಲ್ವೊ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ (ಎಡದಿಂದ ನಾಲ್ಕನೆಯವರು) ಅವರೊಂದಿಗೆ ಚರ್ಚಿಸಿದರು.
-ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಶೈಕ್ಷಣಿಕ ಅಂತರ ತಗ್ಗಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಗ್ರಾಮೀಣ ಪ್ರದೇಶದಲ್ಲಿನ ಶಾಲೆಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳು ಸಹಕಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೋಮವಾರ ಆಯೋಜಿಸಿದ್ದ ‘ಸಿಎಸ್‌ಆರ್ ಶೈಕ್ಷಣಿಕ ಸಮಾವೇಶ – 2024’ ಉದ್ಘಾಟಿಸಿ ಮಾತನಾಡಿದ ಅವರು, ‘ನಗರದಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯ ಗ್ರಾಮೀಣ ಶಾಲೆಗಳಲ್ಲೂ ದೊರೆಯಬೇಕು. ಮಕ್ಕಳು ಶಿಕ್ಷಣಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬರುವುದು ತಪ್ಪಬೇಕು. ಗ್ರಾಮೀಣ ಶೈಕ್ಷಣಿಕ ವ್ಯವಸ್ಥೆಯ ಕುರಿತ ಕೀಳರಿಮೆ ಹೋಗಲಾಡಿಸಬೇಕು’ ಎಂದು ಹೇಳಿದರು.
‘ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಸೇರಿದಂತೆ ರಾಜ್ಯದಾದ್ಯಂತ ಎರಡು ಸಾವಿರ ಸರ್ಕಾರಿ ಶಾಲೆಗಳನ್ನು ‘ಸಮತ್ವ’ ಯೋಜನೆಯಡಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. ಯಾವುದೇ ಜಿಲ್ಲೆಯ, ಯಾವುದೇ ಹಳ್ಳಿಯ ಶಾಲೆಯನ್ನಾದರೂ ಅಭಿವೃದ್ಧಿಗೆ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಶಾಲೆಗಳಲ್ಲಿ ಮೂಲ ಸೌಕರ್ಯ, ತಂತ್ರಜ್ಞಾನ ಸೇರಿದಂತೆ ಯಾವುದೇ ರೀತಿಯ ಅಭಿವೃದ್ಧಿಯನ್ನು, ಹಂತ ಹಂತವಾಗಿ ಕೈಗೊಳ್ಳಬಹುದು. ಸರ್ಕಾರ ನಿಮಗೆ ಅಗತ್ಯ ನೆರವು ನೀಡಲಿದೆ. ಯಾವುದೇ ತೊಡಕುಗಳು ಎದುರಾದರೂ, ಅದನ್ನು ಪರಿಹರಿಸಲಿದೆ’ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಕಂಪನಿಗಳಿಗೆ ಅವರು ಭರವಸೆ ನೀಡಿದರು.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ‘ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. 12,500 ಶಿಕ್ಷಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನೂ ಐದು ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾದರಿ ಶಾಲೆಗಳ ಅಭಿವೃದ್ಧಿ ಯೋಜನೆ ‘ಸಮತ್ವ’ ಕಾರ್ಯಕ್ರಮದ ಲಾಂಛನವನ್ನು ಶಿವಕುಮಾರ್ ಅನಾವರಣಗೊಳಿಸಿದರು. ಈ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ 500 ಶಾಲೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿ) ಅಧ್ಯಕ್ಷ ಅಜಯ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮತ್ತು ವಿವಿಧ ಕಂಪನಿಗಳ ಸಿಇಒಗಳು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.