ADVERTISEMENT

ಕಗ್ಗಂಟಾದ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:06 IST
Last Updated 17 ಜನವರಿ 2020, 20:06 IST
ದಿನೇಶ್ ಗುಂಡೂರಾವ್ ಜತೆ ಸಿದ್ದರಾಮಯ್ಯ
ದಿನೇಶ್ ಗುಂಡೂರಾವ್ ಜತೆ ಸಿದ್ದರಾಮಯ್ಯ   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಜತೆಗೆ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ವಿಚಾರ ಕಗ್ಗಂಟಾಗಿದ್ದು, ವರಿಷ್ಠರಿಗೆ ಹೊಸ ತಲೆನೋವು ತಂದೊಡ್ಡಿದೆ.

ಕಾರ್ಯಾಧ್ಯಕ್ಷರ ನೇಮಕ ವಿಚಾರ ಇತ್ಯರ್ಥವಾಗದೆ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳಲು ವರಿಷ್ಠರಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಹಿರಿಯ ಮುಖಂಡರು ಒಂದೊಂದು ರೀತಿಯಲ್ಲಿ ಒತ್ತಡ ತರುತ್ತಿರುವುದು ದೆಹಲಿ ನಾಯಕರ ತಲೆಬಿಸಿಗೆ ಕಾರಣವಾಗಿದೆ.

‘ನಾಲ್ಕು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಿ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೂ ಅವಕಾಶ ನೀಡಬೇಕು. ಜಾತಿವಾರು ಲೆಕ್ಕಾಚಾರದ ಮೇಲೆ ಈ ಸ್ಥಾನ ಹಂಚಿಕೆ ಮಾಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.

ADVERTISEMENT

ಈ ಬೇಡಿಕೆಗೆ ಮತ್ತೊಬ್ಬ ಹಿರಿಯಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ‘ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ ಒಬ್ಬರು ಕಾರ್ಯಾಧ್ಯಕ್ಷರು ಇದ್ದು, ಅವರ ಜತೆಗೆ ಮತ್ತೊಬ್ಬರನ್ನು ನೇಮಿಸಿದರೆ ಸಾಕು. ವಿಧಾನಸಭೆ ವಿರೋಧ ಪಕ್ಷದ ನಾಯಕ ದಕ್ಷಿಣ ಭಾಗದವರೇ ಇದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಅದೇ ಪ್ರದೇಶದವರಿಗೆ ಕೊಟ್ಟರೆ ಮತ್ತಷ್ಟು ಮಂದಿಗೆ ಅವಕಾಶ ಕೊಡುವ ಅಗತ್ಯ ಕಾಣುವುದಿಲ್ಲ.ಇನ್ನು ಮುಂಬೈ ಕರ್ನಾಟಕದ ಒಬ್ಬರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿದರೆ ಸಾಕು’ ಎಂಬ ಸಲಹೆಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಆಂಧ್ರಪ್ರದೇಶದಲ್ಲಿ ಕಾರ್ಯಾಧ್ಯಕ್ಷರನ್ನಾಗಿ ಇಬ್ಬರನ್ನು ನೇಮಿಸಿದ್ದು, ಅದೇ ರೀತಿ ರಾಜ್ಯದಲ್ಲಿ ಇಬ್ಬರನ್ನು ನೇಮಿಸಿದರೆ ಸಾಕು. ಹೆಚ್ಚು ಮಂದಿಯನ್ನು ನೇಮಕ ಮಾಡುವ ಮೂಲಕ ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು’ ಎಂದು ವರಿಷ್ಠರ ಭೇಟಿ ಸಮಯದಲ್ಲಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.