ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಹಾಗೂ ಜಾತಿ ನಿಂದನೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ತನಿಖಾ ತಂಡವು ನಗರದ 42ನೇ ಎ.ಸಿ.ಜೆ.ಎಂ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿ ದಂತೆ ಒಟ್ಟು ಮೂರು ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಮುನಿರತ್ನ ಸೇರಿ 7 ಆರೋಪಿಗಳ ವಿರುದ್ಧ ಡಿಸೆಂಬರ್‌ನಲ್ಲಿ ಎರಡು ದೋಷಾ ರೋಪ ಪಟ್ಟಿ ಸಲ್ಲಿಸಲಾಗಿತ್ತು.
ಬಳಿಕ ತನಿಖೆ ಮುಂದುವರಿಸಲಾಗಿತ್ತು. ಈಗ ತಾಂತ್ರಿಕ ಸಾಕ್ಷ್ಯಾಧಾರ, ಸಾಕ್ಷಿದಾರರ ಹೇಳಿಕೆಯುಳ್ಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ‘ದೋಷಾರೋಪ ಪಟ್ಟಿಯಲ್ಲಿ ಮುನಿರತ್ನ, ಸುಧಾಕರ್, ಇನ್‌ಸ್ಪೆಕ್ಟರ್ ಐಯಣ್ಣ ರೆಡ್ಡಿ, ಲೋಹಿತ್‌ಗೌಡ, ಶ್ರೀನಿವಾಸ್, ಕಿರಣ್ ಕುಮಾರ್, ಮಂಜುನಾಥ್ ಅವರ ಹೆಸರು ಉಲ್ಲೇಖಿಸಲಾಗಿದೆ. ಅಶ್ಲೀಲ ಫೋಟೊ ತೆಗೆಯುವ ಹಾಗೂ ವಿಡಿಯೊ ಸೆರೆ ಹಿಡಿಯುವಲ್ಲಿ ಆರೋಪಿಗಳ ಪಾತ್ರವನ್ನು ಇದರಲ್ಲಿ ಉಲ್ಲೇಖಿಸ ಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಮುನಿರತ್ನ ವಿರುದ್ಧದ ಅತ್ಯಾಚಾರದ ಆರೋಪ, ಎಚ್‌ಐವಿ ಸೋಂಕಿತರನ್ನು ಬಳಸಿಕೊಂಡು ತಮ್ಮ ವಿರೋಧಿಗಳನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಕಾಯಿಲೆ ಹರಡುವಿಕೆಗೆ ಯತ್ನಿಸಿದ್ದರು ಎಂಬ ಆರೋಪೂ ಸಾಬೀತಾಗಿತ್ತು. ತನಿಖೆ ವೇಳೆ ಇದಕ್ಕೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನೂ ಈಗಿನ ದೋಷಾ ರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಸಿಐಡಿ ಹೇಳಿದೆ.
ಜಾತಿ ನಿಂದನೆ ಪ್ರಕರಣ:
‘ಜಾತಿ ನಿಂದನೆಗೆ ಸಂಬಂಧಿಸಿ ಗುತ್ತಿಗೆದಾರ ವೇಲುನಾಯ್ಕರ್ ದೂರು ನೀಡಿದ್ದರು. ಆಗ ಲಭಿಸಿದ್ದ ಆಡಿಯೊದಲ್ಲಿ ಆರೋಪಿಯ ಧ್ವನಿ ಮಾದರಿ ಹಾಗೂ ಫೋನ್ ಸಂಭಾಷಣೆ ಆಡಿಯೊದಲ್ಲಿರುವ ಧ್ವನಿಗೆ ಹೋಲಿಕೆ ಆಗಿರುವುದು ಎಫ್ಎಸ್ಎಲ್ ತಜ್ಞರ ವರದಿಯಿಂದ ದೃಢಪಟ್ಟಿತ್ತು. ಇದಕ್ಕೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.