ADVERTISEMENT

ಸಿಗರೇಟ್‌ ಲಂಚ ಪ್ರಕರಣ: ಎಸಿಪಿ, ಪಿಎಸ್‌ಐಗಳ ವಿರುದ್ಧ ಎಸಿಬಿ ತನಿಖೆ

ಸಿಗರೇಟ್‌ ಕಂಪನಿಗಳ ಸುಲಿಗೆ ಪ್ರಕರಣ: ಡಿಸಿಪಿ ರಮೇಶ್ ಹೆಗಲಿಗೆ‌

​ಪ್ರಜಾವಾಣಿ ವಾರ್ತೆ
Published 15 ಮೇ 2020, 1:58 IST
Last Updated 15 ಮೇ 2020, 1:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸಿಗರೇಟ್‌ ಕಂಪನಿಗಳ ವಿತರಕರು ಹಾಗೂ ಎನ್–‌ 95 ನಕಲಿ ಮಾಸ್ಕ್‌ ತಯಾರಿಕರಿಂದ ಲಂಚ ಪಡೆದ ಆರೋಪಕ್ಕೆ ಒಳಗಾಗಿರುವ ಸಿಸಿಬಿ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಮತ್ತು ನಿರಂಜನ ಕುಮಾರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಪಿ.ಸಿ. ಆ್ಯಕ್ಟ್‌) ಅಡಿ ಪ್ರಕರಣ ದಾಖಲಾಗಲಿದೆ.

ಸಿಸಿಬಿ ಆರ್ಥಿಕ ಅಪರಾಧ ತಡೆ ವಿಭಾಗದಲ್ಲಿದ್ದ ಮೂವರೂ ಅಧಿಕಾರಿಗಳ ವಿರುದ್ಧ ಡಿಸಿಪಿಗಳಾದ ರವಿಕುಮಾರ್‌ ಮತ್ತು ಕುಲದೀಪ್‌ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ಎರಡೂ ವರದಿ ಪರಿಶೀಲಿಸಿದ ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್,‌ ಭ್ರಷ್ಟಾಚಾರ ಆರೋಪದ ತನಿಖೆಯನ್ನು ಎಸಿಬಿಗೆ ಒಪ್ಪಿಸಿ ಆದೇಶಿಸಿದ್ದಾರೆ.

ಇದರೊಟ್ಟಿಗೆ, ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೂವರ ವಿರುದ್ಧ ದಾಖಲಾಗಿರುವ ಸುಲಿಗೆ ಪ್ರಕರಣದ ತನಿಖೆಯ ಹೊಣೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್‌ ಭಾನೋತ್‌ ಅವರಿಗೆ ವಹಿಸಲಾಗಿದೆ.

ADVERTISEMENT

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಸಿಗರೇಟ್‌ ಮಾರಾಟಕ್ಕೆ ಅನುಕೂಲ ಮಾಡಿಕೊಡಲು ಪ್ರಭುಶಂಕರ್, ಕೆ.ಆರ್‌.‍‍ಪುರದ ವಿತರಕರಿಂದ ₹ 62.5 ಲಕ್ಷ ಲಂಚ ಪಡೆದ ಆರೋಪಕ್ಕೆ ಒಳಗಾಗಿದ್ದಾರೆ. ವಿಷಯ ತಿಳಿದ ಅಜಯ್‌ ಮತ್ತು ನಿರಂಜನ್‌ ಕುಮಾರ್‌ ಸಿಗರೇಟ್‌ ಗೋದಾಮುಗಳ ಮೇಲೆ ದಾಳಿ ಮಾಡಿದ್ದರು.

ಇದಲ್ಲದೆ, ಶ್ರೀನಗರದ ಸಿಗರೇಟ್‌ ವಿತರಕರಿಂದ ₹ 15 ಲಕ್ಷ ಮತ್ತು ಮತ್ತೊಬ್ಬ ವಿತರಕರಿಂದ ₹ 7 ಲಕ್ಷ ಪಡೆದ ಆರೋಪ ಸಿಸಿಬಿ ಅಧಿಕಾರಿಗಳ ಮೇಲಿದೆ. ಪ್ರಕರಣದ ವಿಚಾರಣೆ ವೇಳೆ ಮೂವರ ಬಳಿ ₹ 52 ಲಕ್ಷ ಸಿಕ್ಕಿದೆ.

ಇನ್ನೊಂದು ಪ್ರಕರಣದಲ್ಲಿ, ಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿ ನಕಲಿ ಮಾಸ್ಕ್‌ ತಯಾರಿಸುತ್ತಿದ್ದ ಕಂಪನಿ ಮೇಲೆ ದಾಳಿ ನಡೆಸಿದ ಪ್ರಭುಶಂಕರ್‌ ಮತ್ತು ತಂಡ ಆರೋಪಿಯಿಂದ ₹ 15 ಲಕ್ಷ ಪಡೆದು ಬಂಧಿಸದೆ ಬಿಟ್ಟು ಕಳುಹಿಸಿದ ಆರೋಪ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.