ADVERTISEMENT

ಸಿಗರೇಟ್‌ ಲಂಚ| ಸಿಸಿಬಿ ಅಧಿಕಾರಿಗಳ ವಿರುದ್ಧ ಸುಲಿಗೆ ಪ್ರಕರಣ ದಾಖಲು

ಸಿಗರೇಟ್‌ ವಿತರಕರಿಂದ ಹಣ ಪಡೆದಿದ್ದು ನಿಜ: ಡಿಜಿಪಿಗೆ ವರದಿ

​ಪ್ರಜಾವಾಣಿ ವಾರ್ತೆ
Published 12 ಮೇ 2020, 20:15 IST
Last Updated 12 ಮೇ 2020, 20:15 IST
ಸಿಸಿಬಿ ಎಸಿಪಿ ಪ್ರಭುಶಂಕರ್
ಸಿಸಿಬಿ ಎಸಿಪಿ ಪ್ರಭುಶಂಕರ್   

ಬೆಂಗಳೂರು: ‘ಸಿಗರೇಟ್‌ ವಿತರಕರಿಂದ ಸಿಸಿಬಿ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಮತ್ತು ನಿರಂಜನಕುಮಾರ್‌ ಹಣ ಸುಲಿಗೆ ಮಾಡಿರುವುದು ಸಾಬೀತಾಗಿದ್ದು, ಮೂವರ ವಿರುದ್ಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಸುಲಿಗೆ ಪ್ರಕರಣ‌ ದಾಖಲಾಗಿದೆ.

ಈ ಪ್ರಕರಣದ ಬಗ್ಗೆ ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್‌ ಅವರಿಗೂ ವರದಿ ನೀಡಲಾಗಿದ್ದು, ಯಾವ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಬಗ್ಗೆ ಸೂದ್‌ ಗೃಹ ಇಲಾಖೆಗೆ ಶಿಫಾರಸು ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸದ್ಯ ಮೂವರ ಬಂಧನ ಸನ್ನಿಹಿತವಾಗಿದ್ದು, ಇದರಿಂದ ‍ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ADVERTISEMENT

ಪ್ರಭುಶಂಕರ್‌, ಅಜಯ್‌ ಹಾಗೂ ನಿರಂಜನಕುಮಾರ್‌ ಸಿಗರೇಟ್‌ ವಿತರಕರಿಂದ ಸುಮಾರು ₹ 1.75 ಕೋಟಿ ಸುಲಿಗೆ ಮಾಡಿದ್ದಾರೆ. ಅವರಿಂದ ₹ 52 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣ ಕುರಿತು ಸಿಸಿಬಿ ಡಿಸಿಪಿ ರವಿಕುಮಾರ್‌ ವಿಚಾರಣೆ ನಡೆಸಿ ವರದಿ ನೀಡಿದ್ದರು. ವರದಿಯನ್ನು ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಕಮಿಷನರ್ ಭಾಸ್ಕರ್ ‌ರಾವ್‌ ಅವರಿಗೆ ಸಲ್ಲಿಸಿದ್ದರು.

‘ಲಾಕ್‌ಡೌನ್‌ ವೇಳೆಯಲ್ಲಿ ಸಿಗರೇಟ್‌ ವ್ಯಾಪಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಎಂ.ಡಿ ಅಂಡ್‌ ಸನ್ಸ್‌ ಎಂಬ ಒಂದೇ ಕಂಪನಿಯಿಂದ ಪ್ರಭುಶಂಕರ್ ₹ 62.5 ಲಕ್ಷ ಪಡೆದಿದ್ದರು. ಈ ಸಂಗತಿ ಗೊತ್ತಾಗಿ ಅಜಯ್‌ ಮತ್ತು ನಿರಂಜನ‌ ಕಂಪನಿ ಮೇಲೆ ದಾಳಿ ಮಾಡಿದ್ದರು ಎನ್ನಲಾಗಿದೆ.

ಅಲ್ಲದೆ, ಈ ಇಬ್ಬರು ಇನ್‌ ಸ್ಪೆಕ್ಟರ್‌ಗಳು ಶ್ರೀನಗರದಲ್ಲಿ ಸಿಗರೇಟ್‌ ವ್ಯಾಪಾರ ಮಾಡುತ್ತಿದ್ದ ಸಂತೋಷ್‌ ಎಂಬುವರಿಂದ ₹ 15 ಲಕ್ಷ
ವಸೂಲು ಮಾಡಿದ ಆರೋಪಕ್ಕೂ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.