ADVERTISEMENT

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ: ನರ್ಸ್‌ ಕೊರತೆ, ಶಸ್ತ್ರಕ್ರಿಯೆ ಸ್ಥಗಿತ!

ಚಾಮರಾಜನಗರ: 750 ಹಾಸಿಗೆ ಆಸ್ಪತ್ರೆಗೆ 85 ನರ್ಸ್‌ಗಳು

ಸೂರ್ಯನಾರಾಯಣ ವಿ
Published 13 ಮೇ 2022, 21:45 IST
Last Updated 13 ಮೇ 2022, 21:45 IST
ಯಡಬೆಟ್ಟದಲ್ಲಿರುವ ಸಿಮ್ಸ್‌ನ ಹೊಸ ಬೋಧನಾ ಆಸ್ಪತ್ರೆ
ಯಡಬೆಟ್ಟದಲ್ಲಿರುವ ಸಿಮ್ಸ್‌ನ ಹೊಸ ಬೋಧನಾ ಆಸ್ಪತ್ರೆ   

ಚಾಮರಾಜನಗರ:ನರ್ಸ್‌ಗಳ ಕೊರತೆಯಿಂದಾಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆಯಲ್ಲಿ ತುರ್ತು, ಗಂಭೀರ ಪ್ರಕರಣ ಬಿಟ್ಟು ಉಳಿದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸದಿರಲು ಸಂಸ್ಥೆಯ ಆಡಳಿತ ನಿರ್ಧರಿಸಿದೆ.

2016ರಲ್ಲಿ ಆರಂಭವಾಗಿರುವ ಸಿಮ್ಸ್‌, ಎರಡು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದ್ದು, 750 ಹಾಸಿಗೆಗಳಿವೆ. ಹಳೆಯ ಜಿಲ್ಲಾ ಆಸ್ಪತ್ರೆಯ ಕಟ್ಟಡದಲ್ಲಿ 300 ಹಾಸಿಗೆ ಸಾಮರ್ಥ್ಯ ದ ತಾಯಿ–ಮಗು ಆಸ್ಪತ್ರೆ ಇದೆ. ಹೊರವಲಯದ ಯಡಬೆಟ್ಟದಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆ ಕಳೆದ ಅಕ್ಟೋಬರ್‌ನಲ್ಲಿ ಆರಂಭವಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ಶುಶ್ರೂಷಕರು, ಗ್ರೂಪ್‌ ಡಿ ಸೇರಿದಂತೆ ಇತರ ಸಿಬ್ಬಂದಿ ಸಾಕಷ್ಟು ಸಂಖ್ಯೆಯಲ್ಲಿಲ್ಲ. ಸದ್ಯ 85 ನರ್ಸ್‌ಗಳಿದ್ದಾರೆ.ಹೊಸ ಆಸ್ಪತ್ರೆ ಉದ್ಘಾಟನೆಯಾದ ಬಳಿಕ ಸರ್ಕಾರ ಒಂದೂ ಹುದ್ದೆ ಮಂಜೂರು ಮಾಡಿಲ್ಲ.

ADVERTISEMENT

ಕೋವಿಡ್‌ ಸಮಯದಲ್ಲಿ 120 ನರ್ಸ್‌ಗಳು, 70 ಡಿ–ಗ್ರೂಪ್‌ ನೌಕರರು ಸೇರಿ 226 ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಮಾರ್ಚ್‌ 31ರಂದು ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದೆ. ಹೀಗಾಗಿ, ಸಿಬ್ಬಂದಿ ಕೊರತೆ ಕಾಡುತ್ತಿದೆ.

40 ಶಸ್ತ್ರಚಿಕಿತ್ಸೆ: ಸಿಮ್ಸ್‌ಜಿಲ್ಲೆಯ ಏಕೈಕ ದೊಡ್ಡ ಆಸ್ಪತ್ರೆ. ಜಿಲ್ಲೆಯ ಎಲ್ಲೆಡೆಯಿದ ಜನರು ಇಲ್ಲಿಗೆ ಬರುತ್ತಾರೆ. ನಿತ್ಯ ಸರಾಸರಿ 40 ಶಸ್ತ್ರಕ್ರಿಯೆ ನಡೆಯುತ್ತವೆ. ಹಳೆ ಆಸ್ಪತ್ರೆಯಲ್ಲಿ 9, ಹೊಸ ಆಸ್ಪತ್ರೆಯಲ್ಲಿ 9 ಶಸ್ತ್ರಚಿಕಿತ್ಸಾ ಕೊಠಡಿಗಳಿವೆ.

‘ಶಸ್ತ್ರಚಿಕಿತ್ಸೆ ನಡೆಸಲು ಕನಿಷ್ಠ ಇಬ್ಬರು ನರ್ಸ್‌ಗಳ ನೆರವು ಬೇಕಾಗುತ್ತದೆ. ಕ್ಲಿಷ್ಟಕರ ಶಸ್ತ್ರಕ್ರಿಯೆಗೆ ಹೆಚ್ಚೇ ಸಿಬ್ಬಂದಿ ಬೇಕು. ಶಸ್ತ್ರಕ್ರಿಯೆ ನಂತರವೂ ರೋಗಿಗಳ ಆರೈಕೆಗೆ ಶುಶ್ರೂಷಕರು ಬೇಕು. ಅಷ್ಟು ಸಿಬ್ಬಂದಿ ನಮ್ಮಲ್ಲಿ ಈಗ ಇಲ್ಲ. ಹಾಗಾಗಿ, ಅನಿವಾರ್ಯವಾಗಿ ಕಾಯಬಹುದಾದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಮುಂದೂಡಲಿದ್ದೇವೆ’ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

ರೋಗಿಗಳಿಗೆ ತೊಂದರೆ: ಬಡ ಕುಟುಂಬಗಳೇ ಹೆಚ್ಚಾಗಿರುವ ಜಿಲ್ಲೆಯಲ್ಲಿ ಚಿಕಿತ್ಸೆಗಾಗಿ ಜನರು ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದು, ಶಸ್ತ್ರಚಿಕಿತ್ಸೆ ಸ್ಥಗಿತಗೊಂಡರೆ, ರೋಗಿಗಳಿಗೆ ತೀವ್ರ ತೊಂದರೆಯಾಗಲಿದೆ.

ವರ್ಷದಿಂದ ಬೇಡಿಕೆ

228 ನರ್ಸಿಂಗ್‌ ಹುದ್ದೆ ಹಾಗೂ 344 ಗ್ರೂಪ್‌ ಡಿ ಮತ್ತು ಸಿ ಹುದ್ದೆಗಳನ್ನು ಮಂಜೂರು ಮಾಡುವಂತೆಕಾಲೇಜು ಆಡಳಿತವು ಒಂದು ವರ್ಷದಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌ ಅವರೂ ಈ ವಿಚಾರವನ್ನು ಹಣಕಾಸು ಇಲಾಖೆಯ ಗಮನಕ್ಕೆ ತಂದಿದ್ದಾರೆ.ಆದರೆ, ಪ್ರಯೋಜನವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.