ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಕರ್ನಾಟಕದ ಶಾಲೆಗಳು ಉತ್ತಮ ಸಾಧನೆ ತೋರಿಸಿವೆ.
ಐಸಿಎಸ್‌ಇ (10ನೇ ತರಗತಿ) ಪರೀಕ್ಷೆಗೆ ಹಾಜರಾದ 29,745 ವಿದ್ಯಾರ್ಥಿಗಳ ಪೈಕಿ 29,656 ವಿದ್ಯಾರ್ಥಿಗಳು (ಶೇ 99.70) ತೇರ್ಗಡೆಯಾಗಿದ್ದಾರೆ. ಐಎಸ್‌ಸಿ (12ನೇ ತರಗತಿ) ಪರೀಕ್ಷೆಗೆ ಒಟ್ಟು 2,442 ವಿದ್ಯಾರ್ಥಿಗಳು ಹಾಜರಾಗಿದ್ದು, 2,433 (ಶೇ 99.63) ಮಂದಿ ತೇರ್ಗಡೆ ಆಗಿದ್ದಾರೆ. ಐಸಿಎಸ್‌ಇ ಒಟ್ಟು 425, ಐಎಸ್‌ಸಿ 55 ಶಾಲೆಗಳಿವೆ.
ಐಸಿಎಸ್‌ಇನಲ್ಲಿ ಹೆಣ್ಣು ಮಕ್ಕಳು ಶೇ 99.82ರಷ್ಟು ಸಾಧನೆ ತೋರಿಸಿದ್ದು, ಹುಡುಗರಿಗಿಂತ (ಶೇ 99.65) ಉತ್ತಮ ಸಾಧನೆ ಮಾಡಿದ್ದಾರೆ. ಐಎಸ್‌ಸಿಯಲ್ಲಿ ಬಾಲಕಿಯರು ಶೇ 99.61ರಷ್ಟು ಉತ್ತೀರ್ಣರಾದರೆ, ಹುಡುಗರ ತೇರ್ಗಡೆ ಪ್ರಮಾಣ ಶೇ 99.65.
ಐಸಿಎಸ್‌ಇ ಮತ್ತು ಐಎಸ್‌ಸಿ ಪರೀಕ್ಷೆ ಬರೆದ ರಾಜ್ಯದ ಹಲವು ವಿದ್ಯಾರ್ಥಿಗಳು ಶೇ 99ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಐಸಿಎಸ್‌ಇಯಲ್ಲಿ ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪ್ರಗತಿ ಗಿರೀಶ್ ಆತ್ರೇಯ ಮತ್ತು ನೊಟ್ರೆ ಡೇಮ್ ಅಕಾಡೆಮಿಯ ಸಾಕ್ಷಿ ಶೇ 99.80 ಅಂಕ ಗಳಿಸಿದ್ದಾರೆ. ಐಸಿಎಸ್‌ಇಯಲ್ಲಿ ಗ್ರೀನ್‌ವುಡ್ ಹೈಸ್ಕೂಲ್‌ನ ಸ್ವರ್ಣಾ ಚೌಧರೆ, ರಾಘವ್ ದೀಕ್ಷಿತ್ ಮತ್ತು ಅನನ್ಯ ಪಿ ಮಿನ್ನಮರೆಡ್ಡಿ ಶೇ 99.60 ಅಂಕ ಗಳಿಸಿದ್ದಾರೆ.
ಐಎಸ್‌ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್‌ನ ಅರ್ನಯ್ ಗುಪ್ತಾ ಮತ್ತು ದೀಪ್ತಿ ಮೆನನ್ ಕ್ರಮವಾಗಿ ಶೇ 99.50 ಮತ್ತು ಶೇ 99.25 ಅಂಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.