ADVERTISEMENT

ಹವಾಮಾನ ವೈಪರೀತ್ಯ | ಒಗ್ಗಟ್ಟಿನ ಹೋರಾಟ ಅಗತ್ಯ: ಪ್ರಧಾನಿ ಮೋದಿ

ಜಿ 20 ಶೃಂಗಭೆ

ಪಿಟಿಐ
Published 22 ನವೆಂಬರ್ 2020, 20:37 IST
Last Updated 22 ನವೆಂಬರ್ 2020, 20:37 IST
ಮೋದಿ
ಮೋದಿ   

ನವದೆಹಲಿ/ರಿಯಾದ್: ಹವಾಮಾನ ವೈಪರೀತ್ಯದ ವಿರುದ್ಧ ಎಲ್ಲರೂ ಜತೆಯಾಗಿ, ಸಮಗ್ರವಾದ ಹೋರಾಟ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಿ20 ಶೃಂಗಸಭೆಯಲ್ಲಿ ಕರೆ ನೀಡಿದರು.

ಕೋವಿಡ್‌–19 ದುರಿತ ಕಾಲದಲ್ಲಿ ಎಲ್ಲರೂ ನಾಗರಿಕರ ಆರೋಗ್ಯ ರಕ್ಷಣೆ ಮತ್ತು ಆರ್ಥಿಕತೆಯತ್ತ ಗಮನ ಹರಿಸಿದ್ದಾರೆ. ಅಂತೆಯೇ ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡುವುದರತ್ತ ಗಮನಹರಿಸುವುದೂ ಅಷ್ಟೇ ಮುಖ್ಯ ಎಂದು ಮೋದಿ ಹೇಳಿದರು.

‘ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾರ್ಗಸೂಚಿ ಅಡಿ ಭಾರತ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ನಿಟ್ಟಿನಲ್ಲಿ ಭಾರತವು ಎಲ್ಇಡಿ ದೀಪಗಳನ್ನು ಜನಪ್ರಿಯಗೊಳಿಸಿದೆ. ಇದರಿಂದ ವರ್ಷಕ್ಕೆ 38 ದಶಲಕ್ಷ ಟನ್‌ಗಳಷ್ಟು ಪ್ರಮಾಣದ ಇಂಗಾಲದ ಹೊರಸೂಸುವಿಕೆ ತಡೆಗಟ್ಟಿದಂತಾಗಿದೆ. ‘ಉಜ್ವಲ‘ ಯೋಜನೆ ಮೂಲಕ ದೇಶದ 80 ದಶಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಅಡುಗೆಮನೆಯನ್ನು ಹೊಗೆಯಿಂದ ಮುಕ್ತಗೊಳಿಸಲಾಗಿದೆ. ಭಾರತದಲ್ಲಿ ಅರಣ್ಯ ಪ್ರದೇಶ ವಿಸ್ತರಿಸುತ್ತಿದೆ. ಸಿಂಹ–ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದರು.

ADVERTISEMENT

‘ಹೊಸ ಮತ್ತು ಸುಸ್ಥಿರ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಹೆಚ್ಚಿಸಲು ಇದು ಅತ್ಯುತ್ತಮ ಸಮಯ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನ ಮತ್ತು ಹಣಕಾಸಿನ ಹೆಚ್ಚಿನ ಬೆಂಬಲ ಇದ್ದರೆ ಇಡೀ ಜಗತ್ತು ವೇಗವಾಗಿ ಪ್ರಗತಿ ಸಾಧಿಸಬಹುದು’ ಎಂದರು.

ಭಾರತದ ಆತಿಥ್ಯ: 2022ರ ಜಿ20 ಶೃಂಗಸಭೆಯ ಆತಿಥ್ಯವನ್ನು ಭಾರತ ವಹಿಸಲಿದೆ.

‘ಪ್ಯಾರಿಸ್ ಒಪ್ಪಂದ ಅನುಷ್ಠಾನಕ್ಕೆ ಕರೆ’
ಬೀಜಿಂಗ್
: ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಿ ಜಿ20 ರಾಷ್ಟ್ರಗಳು ಪ್ಯಾರಿಸ್ ಒಪ್ಪಂದವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಭಾನುವಾರ ಹೇಳಿದ್ದಾರೆ.

ಮುಂದಿನ ವರ್ಷದ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜೋ ಬೈಡನ್ ಅವರು ಪ್ಯಾರಿಸ್ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವ ಭರವಸೆ ನೀಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಬೈಡನ್ ಉತ್ತೇಜನ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದು ಜಿನ್‌ಪಿಂಗ್ ಹೇಳಿದರು.

ಕೋವಿಡ್ ಲಸಿಕೆ ನ್ಯಾಯಸಮ್ಮತ ವಿತರಣೆಗೆ ಒಮ್ಮತ
ವಾಷಿಂಗ್ಟನ್: ಕೋವಿಡ್‌–19 ಲಸಿಕೆಯ ನ್ಯಾಯಸಮ್ಮತ ವಿತರಣೆಗೆ ಜಿ20 ದೇಶಗಳ ನಾಯಕರು ಸಮ್ಮತಿಸಿದ್ದಾರೆ. ಲಸಿಕೆ ವಿತರಣೆ, ಪರೀಕ್ಷೆಯಿಂದ ಬಡ ದೇಶಗಳು ಹೊರಗುಳಿಯದಂತೆ ನೋಡಿಕೊಳ್ಳುವುದು, ಆ ದೇಶಗಳಿಗೆ ಸಾಲದ ನೆರವು ವಿಸ್ತರಣೆ ಬಗ್ಗೆ ಜಿ20 ದೇಶಗಳ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

‘ಎಲ್ಲ ಜನರಿಗೆ ನ್ಯಾಯಯುತ ವಿತರಣೆ ಖಚಿತಪಡಿಸಿಕೊಳ್ಳುವ ವಿಚಾರದಲ್ಲಿ ಯಾವುದೇ ಪ್ರಯತ್ನವನ್ನು ಸದಸ್ಯರ ರಾಷ್ಟ್ರಗಳು ಕೈಬಿಡುವುದಿಲ್ಲ ಎಂಬುದನ್ನು ದೃಢಪಡಿಸುತ್ತೇವೆ’ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.