ಬೆಂಗಳೂರು: ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ಹಾಗೂ ಅಜರ್‌ಬೈಜಾನ್ ದೇಶಗಳ ಜತೆಗಿನ ಜವಳಿ ವ್ಯವಹಾರವನ್ನು ಬೆಂಗಳೂರಿನ ಬಟ್ಟೆ ವ್ಯಾಪಾರಿಗಳ ಸಂಘ ಸ್ಥಗಿತಗೊಳಿಸಿದೆ.
‘ಭಾರತದೊಂದಿಗಿನ ಸಶಸ್ತ್ರ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ಮತ್ತು ಅಜರ್‌ಬೈಜಾನ್ ದೇಶಗಳೊಂದಿಗೆ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಪ್ರಕಾಶ್‌ಚಂದ್ ಪಿರ್ಗಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಟರ್ಕಿಯಲ್ಲಿ ಭೂಕಂಪವಾದಾಗ ಅಲ್ಲಿಗೆ ಬಟ್ಟೆ, ಆಹಾರ, ಹಣ್ಣು ಮತ್ತು ಔಷಧಗಳನ್ನು ಮೊದಲು ಕಳುಹಿಸಿದ್ದು ಭಾರತ. ನಮ್ಮ ದೇಶದ ಜನರ ಮೇಲೆ ಭಯೋತ್ಪಾದನಾ ದಾಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿದೆ. ಇಂತಹ ದ್ರೋಹವನ್ನು ಸಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಕೇಂದ್ರ ಸರ್ಕಾರ ಮತ್ತು ಸೇನೆಗೆ ನಮ್ಮ ರಾಜ್ಯ ಸರ್ಕಾರವು ಬೆಂಬಲ ಘೋಷಿಸಿದೆ. ಹಲವು ವ್ಯಾಪಾರಿ ಸಂಘಗಳು ಟರ್ಕಿ ಜತೆಗೆ ವ್ಯವಹಾರ ನಿಲ್ಲಿಸಿವೆ. ಬೆಂಗಳೂರಿನ ಸಗಟು ಬಟ್ಟೆ ವ್ಯಾಪಾರಿಗಳೂ ಸೇನೆಗೆ ಬೆಂಬಲ ಸೂಚಿಸಲು ಟರ್ಕಿ ಜತೆಗೆ ವ್ಯಾಪಾರ ನಿಲ್ಲಿಸುವ ನಿರ್ಧಾರ ಮಾಡಿದ್ದೇವೆ’ ಎಂದು ಪ್ರಕಾಶ್‌ಚಂದ್ ಪಿರ್ಗಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ಸಂಘದಲ್ಲಿ 1,500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅವರೂ ಸೇರಿ ಬೆಂಗಳೂರಿನಲ್ಲಿ 3,000ಕ್ಕೂ ಹೆಚ್ಚು ಸಗಟು ಬಟ್ಟೆ ವ್ಯಾಪಾರಿಗಳು ಇದ್ದಾರೆ. ಬೆಂಗಳೂರಿನ ಸಗಟು ಬಟ್ಟೆ ವ್ಯಾಪಾರಿಗಳು ಟರ್ಕಿಯಿಂದ ದೊಡ್ಡಮಟ್ಟದಲ್ಲಿ ಹತ್ತಿಯ ಬಟ್ಟೆ ಮತ್ತು ಟರ್ಕಿ ಟವಲ್‌ಗೆ ಬೇಕಾದ ಬಟ್ಟೆಯನ್ನು ಆಮದು ಮಾಡಿಕೊಳ್ಳುತ್ತಾರೆ. ಎಲ್ಲ ವ್ಯಾಪಾರಿಗಳ ಜತೆ ಮಾತನಾಡಿದ್ದೇವೆ. ಎಲ್ಲರೂ, ಟರ್ಕಿ ಮತ್ತು ಅಜರ್‌ಬೈಜಾನ್ ಜತೆಗಿನ ವ್ಯವಹಾರಗಳನ್ನು ನಿಲ್ಲಿಸಲು ಒಪ್ಪಿದ್ದಾರೆ’ ಎಂದರು.
‘ಈಗಾಗಲೇ ಆಮದು ಮಾಡಿಕೊಳ್ಳಲು ನೀಡಿದ್ದ ಖರೀದಿ ಆರ್ಡರ್‌ಗಳನ್ನು ಬಹುತೇಕ ಸದಸ್ಯರು ರದ್ದುಪಡಿಸಿದ್ದಾರೆ. ಈ ನಿರ್ಧಾರದಿಂದ ನಮ್ಮ ವ್ಯಾಪಾರಕ್ಕೆ ಸ್ವಲ್ಪ ದಿನ ಸಮಸ್ಯೆ ಮತ್ತು ನಷ್ಟವಾಗಲಿದೆ. ಟರ್ಕಿಯ ಬಟ್ಟೆಗೆ ಪರ್ಯಾಯ ಮೂಲವನ್ನು ಹುಡುಕುತ್ತಿದ್ದೇವೆ. ಹೊಸ ದೇಶಗಳೊಂದಿಗೆ, ತಿಂಗಳೊಳಗೆ ವಹಿವಾಟು ಕುದುರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.