ADVERTISEMENT

ಕಾನೂನು ವಿ.ವಿಗೆ ಸಿದ್ದಪ್ಪ ಕಂಬಳಿ ಹೆಸರಿಡಲು ಪ್ರಯತ್ನ: ಸಿಎಂ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 3:11 IST
Last Updated 24 ಸೆಪ್ಟೆಂಬರ್ 2021, 3:11 IST
ವಿಧಾನಪರಿಷತ್ತಿನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ
ವಿಧಾನಪರಿಷತ್ತಿನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸರ್‌. ಸಿದ್ದಪ್ಪ ಕಂಬಳಿ ಅವರ ಹೆಸರನ್ನು ನಾಮಕರಣ ಮಾಡಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ‘ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಏಳು ಖಾತೆಗಳ ಸಚಿವರಾಗಿದ್ದ ಧೀಮಂತ ನಾಯಕ ಸಿದ್ದಪ್ಪ ಕಂಬಳಿ ಅವರ ಹೆಸರನ್ನು ಕಾನೂನು ವಿಶ್ವವಿದ್ಯಾಲಯಕ್ಕೆ ಇಡಬೇಕೆಂಬ ಬೇಡಿಕೆ ನನಗೂ ಸಂತೋಷ ತಂದಿದೆ. ವಿಶ್ವವಿದ್ಯಾಲಯದ ಸಿಂಡಿಕೇಟ್‌ ಹಂತದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕು. ಅಲ್ಲಿಂದಲೇ ಪ್ರಸ್ತಾವವನ್ನು ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ’ ಎಂದರು.

ಕಾನೂನು ವಿಶ್ವವಿದ್ಯಾಲಯಕ್ಕೆ ಜಗಜ್ಯೋತಿ ಬಸವೇಶ್ವರ, ಡಾ.ಬಿ.ಆರ್‌. ಅಂಬೇಡ್ಕರ್‌ ಸೇರಿದಂತೆ ಹಲವರ ಹೆಸರನ್ನು ಇಡಬೇಕೆಂಬ ಬೇಡಿಕೆಗಳು ಬಂದಿದ್ದವು. ಅಂತಿಮವಾಗಿ ‘ಕರ್ನಾಟಕ ಕಾನೂನು ವಿಶ್ವವಿದ್ಯಾಲಯ’ ಎಂಬ ಹೆಸರನ್ನು ಇಡಲಾಗಿತ್ತು. ಸಿದ್ದಪ್ಪ ಕಂಬಳಿ ಅವರು ನಾಡು ಕಂಡ ಮಹಾನ್‌ ನಾಯಕರಲ್ಲಿ ಒಬ್ಬರು. ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವ ಕುರಿತು ಕಾನೂನು ಸಚಿವರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

‘ಸಿದ್ದಪ್ಪ ಕಂಬಳಿ ಅವರು ಅಂಬೇಡ್ಕರ್‌ ಅವರ ಒಡನಾಡಿ. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಸಪ್ತ ಖಾತೆಗಳ ಸಚಿವರಾಗಿದ್ದ ಹಿಂದುಳಿದ ವರ್ಗಗಳ ಧೀಮಂತ ನಾಯಕ. ಅವರ ಹೆಸರನ್ನು ಇಡುವುದರಿಂದ ಕಾನೂನು ವಿಶ್ವವಿದ್ಯಾಲಯದ ಗೌರವವೂ ಹೆಚ್ಚುತ್ತಿದೆ. ಈ ಕುರಿತು ತ್ವರಿತವಾಗಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು’ ಎಂದು ಹರಿಪ್ರಸಾದ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.