ADVERTISEMENT

ಮೂಲಸೌಕರ್ಯಕ್ಕೆ ₹500 ಕೋಟಿ: ಉಡುಪಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 11:02 IST
Last Updated 13 ಜುಲೈ 2022, 11:02 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಉಡುಪಿ: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಾನಿಗೊಳಗಾಗಿರುವ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಸಣ್ಣ ಸೇತುವೆಗಳು ಮರುಸ್ಥಾಪನೆ ಹಾಗೂ ತುರ್ತು ಕಾರ್ಯಗಳಿಗೆ ತಕ್ಷಣ ₹ 500 ಕೋಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ, ಮೂಲಸೌಕರ್ಯ ಹಾಳಾಗಿವೆ.

ತಕ್ಷಣ ಮೂಲಸೌಕರ್ಯ ಮರು ಸ್ಥಾಪನೆಗೆ ₹ 500 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದು, ಎಲ್ಲ ಜಿಲ್ಲೆಗಳಿಂದ ಮಳೆ ಹಾನಿ ವರದಿ ತರಿಸಿಕೊಂಡು ಎನ್‌ಡಿಆರ್‌ಎಫ್‌ ಅಡಿಯಲ್ಲಿ ಕೇಂದ್ರದಿಂದ ಹೆಚ್ಚಿನ ನೆರವು ಕೋರಲಾಗುವುದು ಎಂದರು.

ADVERTISEMENT

ಮೊಸರಲ್ಲಿ ಕಲ್ಲು ಹುಡುಕುವ ಯತ್ನ

ವಿರೋಧ ಪಕ್ಷಗಳು ನಿದ್ರೆ ಮಾಡುತ್ತಿರುವ ಸಿಂಹವನ್ನು ನಂಬುವ ಸಂಸ್ಕೃತಿ ಪಾಲಿಸಿಕೊಂಡು ಬಂದರೆ, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾಶೀಲತೆಗೆ ತಕ್ಕಂತೆ ಸಶಕ್ತ ಹಾಗೂ ಘರ್ಜನಾ ರೂಪದಲ್ಲಿರುವ ಸಿಂಹವನ್ನು ನಂಬಿದೆ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.

ರಾಷ್ಟ್ರಲಾಂಛನವನ್ನು ವಿರೋಧ ಪಕ್ಷಗಳು ಹಾಗೂ ಬಿಜೆಪಿ ನೋಡುವ ದೃಷ್ಟಿಕೋನಗಳು ಬೇರೆ. ಸಾರಾನಾಥದಲ್ಲಿರುವ ಅಶೋಕ ಸ್ಥಂಭದ ಮೇಲಿರುವ ಸಿಂಹದ ಮಾದರಿಯಂತೆಯೇ ರಾಷ್ಟ್ರಲಾಂಛನ ನಿರ್ಮಿಸಿದ್ದರೂ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ಸಿಂಹ ಉಗ್ರವಾಗಿದೆ, ವ್ಯಾಘ್ರವಾಗಿದೆ ಎಂದು ಹೇಳಿಕೆ ನೀಡುತ್ತ ಮೊಸರಲ್ಲಿ ಕಲ್ಲು ಹುಡುಕುತ್ತಿವೆ ಎಂದು ಟೀಕಿಸಿದರು.

ಕಾಳಜಿ ಕೇಂದ್ರಗಳಲ್ಲಿ ಮೊಟ್ಟೆ

ನೆರೆ ಪ್ರದೇಶಗಳಲ್ಲಿ ತೆರೆಯುವ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಪೌಷ್ಟಿಕಾಂಶಯುಕ್ತ ಆಹಾರದ ಜತೆಗೆ ಮೊಟ್ಟೆ ನೀಡಲಾಗುವುದು. ಕಾಳಜಿ ಕೇಂದ್ರಗಳಿಗೆ ಬಾರದೆ ಸಂಬಂಧಿಗಳ ಮನೆಯಲ್ಲಿ ಉಳಿಯುವವರಿಗೆ ಆಹಾರದ ಕಿಟ್‌ ನೀಡಲಾಗುವುದು ಎಂದರು.

ಭೂಕಂಪನ, ಭೂಕುಸಿತ ತಡೆಗೆ ಅಧ್ಯಯನ

ಕೊಡಗು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭೂಕಂಪನದ ಅಧ್ಯಯನ ಮಾಡಲು ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ, ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯಗಳಿಂದ ಸುದೀರ್ಘ ಅಧ್ಯಯನಕ್ಕೆ ಸೂಚಿಸಿ ಪರಿಹಾರ ಸಹಿತ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ.

ಭೂ ಕುಸಿತ ತಡೆಗೆ ಅಮೃತ ವಿಶ್ವವಿದ್ಯಾಲಯದಿಂದ ಕೊಡಗು ಭಾಗದಲ್ಲಿ ಅಧ್ಯಯನ ನಡೆಯುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟಗಳಲ್ಲಿಯೂ ಅಧ್ಯಯನ ಮಾಡಲು ಆದೇಶಿಸಲಾಗಿದೆ. ಸಂಸ್ಥೆಗಳು ನೀಡುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.