ADVERTISEMENT

ಮಾನಸಿಕ ರೋಗ ಚಿಕಿತ್ಸೆಗೆ ಜಿಲ್ಲೆಗಳಲ್ಲೇ ಸೌಲಭ್ಯ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 20:06 IST
Last Updated 24 ಆಗಸ್ಟ್ 2022, 20:06 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮಾನಸಿಕ ರೋಗಗಳಿಗೆ ಜಿಲ್ಲಾ ಕೇಂದ್ರಗಳಲ್ಲೇ ಉತ್ತಮವಾದ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯ ಮೂಲಕ ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, “ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಎಳೆಯ ಮಕ್ಕಳಲ್ಲೂ ಖಿನ್ನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇಂತಹ ಸಮಸ್ಯೆಗಳಿಗೆ ತ್ವರಿತ ಚಿಕಿತ್ಸೆಯ ಅಗತ್ಯವಿದೆʼ ಎಂದರು.

ನಿಮ್ಹಾನ್ಸ್‌ ಮೇಲೆ ಹೆಚ್ಚಿನ ಒತ್ತಡವಿದೆ. ಅದನ್ನು ತಪ್ಪಿಸಲು ಮತ್ತು ಜನರಿಗೆ ಜಿಲ್ಲಾ ಮಟ್ಟದಲ್ಲೇ ಅತ್ಯುತ್ತಮವಾದ ಮಾನಸಿಕ ರೋಗ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಹೊಸ ಯೋಜನೆ ಜಾರಿಗೊಳಿಸಲಾಗುವುದು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ನೇತೃತ್ವದಲ್ಲಿ ಈ ಯೋಜನೆಯ ರೂಪುರೇಷೆಗಳನ್ನು ಅಂತಿಮಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ಕರ್ನಾಟಕದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಜಾರಿಗೆ ಬಂದಿವೆ. ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಶೀಘ್ರದಲ್ಲಿ ಆರಂಭವಾಗಲಿದೆ. ಒಂಬತ್ತು ಜಿಲ್ಲೆಗಳಲ್ಲಿ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಯೋಜನೆಯೂ ವರ್ಷದೊಳಗೆ ಅನುಷ್ಠಾನಗೊಳ್ಳಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ರಾಜ್ಯವು ಕೋವಿಡ್‌ ಅನ್ನು ಯಶಸ್ವಿಯಾಗಿ ಎದುರಿಸಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಸೇವೆಯೇ ಕಾರಣ. ಇವೆರಲ್ಲರೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದರಿಂದ ರಾಜ್ಯದ ಜನರು ಕೋವಿಡ್‌ನಿಂದ ಪಾರಾಗಲು ಸಾಧ್ಯವಾಯಿತು ಎಂದರು.

ಡಾ. ಗುರುರಾಜ್‌ ಜಿ. ನೇತೃತ್ವದ ವಿಷನ್‌ ಗ್ರೂಪ್‌ ರಾಜ್ಯದ ಆರೋಗ್ಯ ಸೇವೆಗಳಲ್ಲಿ ಸುಧಾರಣೆ ತರುವ ಕುರಿತು ಅತ್ಯುತ್ತಮವಾದ ವರದಿ ನೀಡಿದೆ. ಈ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದರೆ ಆರೋಗ್ಯ ಸೇವೆಗಳ ವಿಚಾರದಲ್ಲಿ ಐದು ವರ್ಷಗಳಲ್ಲಿ ಕರ್ನಾಟಕವು ಏಷ್ಯಾದಲ್ಲೇ ಮುಂಚೂಣಿಯಲ್ಲಿರಲಿದೆ ಎಂದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಮಾತನಾಡಿ, ಆರೋಗ್ಯ ಸೇವೆಯಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. 25 ಲಕ್ಷ ಮಂದಿ ಕೋವಿಡ್‌ ರೋಗಿಗಳಿಗೆ ಡಿಜಿಟಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ಆಪ್ತ ಸಮಾಲೋಚನೆಯ ನೆರವು ಒದಗಿಸಲಾಗಿದೆ. ಇ-ಸಂಜೀವಿನಿ ಪೋರ್ಟಲ್‌ ಮೂಲಕ 50 ಲಕ್ಷ ಜನರಿಗೆ ವೈದ್ಯಕೀಯ ಸಮಾಲೋಚನೆ ಸೌಲಭ್ಯ ಒದಗಿಸಿದ್ದು, ಈ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದರು.

ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಆರ್‌. ಅಶೋಕ ಸಂಸದ ಉಮೇಶ್‌ ಜಾಧವ್‌, ವಿಧಾನ ಪರಿಷತ್‌ ಸದಸ್ಯ ಎ. ದೇವೇಗೌಡ, ಶಾಸಕ ರಾಜಶೇಖರ ಪಾಟೀಲ ತೇಲ್ಕೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್‌, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಇಂದುಮತಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ ನಿರ್ದೇಶಕಿ ಡಾ. ಪರಿಮಳಾ ಮರೂರು ಉಪಸ್ಥಿತರಿದ್ದರು.

250 ವೈದ್ಯರಿಗೆ ಸನ್ಮಾನ

ಸರ್ಕಾರಿ ಆಸ್ಪತ್ರೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು, ಆರೋಗ್ಯ ಇಲಾಖೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದವರು, ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದವರು ಸೇರಿದಂತೆ 250 ಮಂದಿ ವೈದ್ಯಾಧಿಕಾರಿಗಳನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಸನ್ಮಾನಿಸಲಾಯಿತು.

ವರದಿ ಸಲ್ಲಿಕೆ: ಡಾ. ಗುರುರಾಜ್‌ ಜಿ. ನೇತೃತ್ವದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷನ್‌ ಗ್ರೂಪ್‌ ತನ್ನ ವರದಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.