ADVERTISEMENT

ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋಣ ಬನ್ರಿ: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಸವಾಲು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 14:44 IST
Last Updated 21 ಸೆಪ್ಟೆಂಬರ್ 2022, 14:44 IST
ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ   

ಬೆಂಗಳೂರು: ‘ಭ್ರಷ್ಟಾಚಾರದ ಕುರಿತು ವಿಧಾನಮಂಡದಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದ್ದು, ಚರ್ಚೆಯಿಂದ ಪಲಾಯನ ಮಾಡುವುದಿಲ್ಲ. ನೀವೂ ಸಿದ್ದರಾಗಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

‘ಶೇ 40 ಲಂಚಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ‘ಭ್ರಷ್ಟಾಚಾರ ಇವತ್ತು ನಿನ್ನೆಯ ಪ್ರಶ್ನೆ ಅಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೂಪದಲ್ಲಿ ಬಂದಿದೆ. ಚರ್ಚೆಗೆ ನೀವೂ ಸಿದ್ಧರಿರಬೇಕು. ಸರ್ಕಾರವೂ ಇದಕ್ಕೆ ತಯಾರಿದೆ’ ಎಂದು ಹೇಳಿದರು.

‘ಚರ್ಚೆಗೆ ಬರುವಾಗ ನಿಮ್ಮ ಆರೋಪಗಳಿಗೆ ಪೂರಕವಾದ ವಿಶ್ವಾಸಾರ್ಹ ದಾಖಲೆಗಳನ್ನು ತಂದು ಮಾತನಾಡಿ’ ಎಂದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದರು. ‘ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ವಿವರವಾದ ವರದಿಗಳು ಪ್ರಕಟವಾಗಿವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ADVERTISEMENT

2013 ರಿಂದ 2018 ರವರೆಗೆ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಲು ನೋಟಿಸ್‌ ನೀಡಿದ್ದು, ಅದರ ಬಗ್ಗೆ ಚರ್ಚೆ ಆಗಬೇಕು ಎಂದು ಬಿಜೆಪಿಯ ಪಿ. ರಾಜೀವ್‌ ಆಗ್ರಹಿಸಿದರು. ಅದನ್ನು ಸೇರಿಸಿಯೇ ಪೂರ್ಣ ಪ್ರಮಾಣದ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.