ADVERTISEMENT

ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್‌ ಪ್ರಸ್ತಾಪಿಸದಿರಲು ಆಗ್ರಹ

ಪ್ರಧಾನಿಗೆ ಸ್ಟಾಲಿನ್‌ ಪತ್ರ: ಬೊಮ್ಮಾಯಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 10:35 IST
Last Updated 14 ಜೂನ್ 2022, 10:35 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಇದೇ 23 ರಂದು ದೆಹಲಿಯಲ್ಲಿ ನಡೆಯುವ ಕಾವೇರಿ ನದಿ ಮೇಲ್ವಿಚಾರಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್‌ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿಯವರು ಪ್ರಧಾನಿಯವರಿಗೆ ಪತ್ರ ಬರೆದಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಸರ್ಕಾರ ಪ್ರಧಾನಿಯವರಿಗೆ ಪತ್ರ ಬರೆದಿರುವುದು ಅಪ್ಪಟ ರಾಜಕೀಯ ಸ್ಟಂಟ್‌ ಎಂದು ವ್ಯಾಖ್ಯಾನಿಸಿದರು.

ಕಾವೇರಿ ನದಿ ಮೇಲ್ವಿಚಾರಣಾ ಪ್ರಾಧಿಕಾರವು ಮೇಕೆದಾಟು ಯೋಜನೆಯ ಡಿಪಿಆರ್‌ ಅನುಮೋದನೆ ಮಾಡಬೇಕೆಂದು ಕೇಂದ್ರ ಜಲ ಆಯೋಗವೇ ಈ ಹಿಂದೆ ಷರತ್ತು ವಿಧಿಸಿತ್ತು. ಪ್ರಾಧಿಕಾರವು ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು ಇದೇ 23 ರಂದು ಅಂತಿಮ ಸಭೆ ನಡೆಯಲಿದೆ. ಕಾವೇರಿ ನದಿ ನೀರಿನ ವಿಷಯವಾಗಿ ತಮಿಳುನಾಡು ಹಲವು ವರ್ಷಗಳಿಂದ ತಕರಾರು ತೆಗೆಯುತ್ತಲೇ ಬಂದಿದೆ. ಈಗ ಬರೆದಿರುವ ಪತ್ರ ಅದರ ಭಾಗ. ಈ ಪತ್ರ ಕಾನೂನಿನ ಚೌಕಟ್ಟಿನಲ್ಲಿ ನಿಲ್ಲುವುದೂ ಇಲ್ಲ. ಕಾನೂನು ಬಾಹಿರ ಪತ್ರವನ್ನು ಕೇಂದ್ರ ಸರ್ಕಾರವೂ ಪರಿಗಣಿಸುವುದಿಲ್ಲ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದೂ ಬೊಮ್ಮಾಯಿ ಹೇಳಿದರು.

ADVERTISEMENT

ಜೂನ್‌ 23 ರಂದು ನಡೆಯುವ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗವಹಿಸುತ್ತಾರೆ. ಸಭೆಯನ್ನು ಈ ಮೊದಲು ಜೂ.16 ಕ್ಕೆ ನಿಗದಿ ಮಾಡಲಾಗಿತ್ತು. ಅದನ್ನು 23 ಕ್ಕೆ ಮುಂದೂಡಲಾಗಿದೆ.

ನಮ್ಮ ಪಾಲಿನ ನೀರು ಬಳಕೆಗೆ ಆಕ್ಷೇಪವೆ?:

ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಕಾವೇರಿ ನದಿ ನೀರಿನ ನಮ್ಮ ಪಾಲಿನ 4.75 ಟಿಎಂಟಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಡಿಪಿಆರ್ ಮಾಡಿದ್ದೇವೆ. ಈ ನೀರನ್ನು ಬೆಂಗಳೂರಿನ ಜನರಿಗೆ ಕುಡಿಯುವ ಉದ್ದೇಶಕ್ಕೆ ಬಳಸಲಾಗುವುದು. ಅದಕ್ಕೆ ತಮಿಳುನಾಡು ಆಕ್ಷೇಪಿಸುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಾವು ತಮಿಳುನಾಡಿನ ನೀರು ಬಳಸಿಕೊಳ್ಳುತ್ತಿಲ್ಲ. ಅವರಿಗೆ ಕೊಡಬೇಕಾದ ನೀರನ್ನು ಕೊಡುತ್ತಿದ್ದೇವೆ. ಅದಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ಆದರೆ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಅವರು ಅಡ್ಡಿ ಮಾಡುತ್ತಿರುವುದು ಸರಿಯಲ್ಲ. ಬೆಂಗಳೂರಿನಲ್ಲಿ 30 ರಾಜ್ಯಗಳ ಜನರು ಮತ್ತು ವಿದೇಶಿ ಪ್ರಜೆಗಳು ನೆಲೆಸಿದ್ದಾರೆ. ಸುಮಾರು 1.50 ಕೋಟಿ ಜನ ವಾಸವಿದ್ದಾರೆ. ಇವರಿಗೆ ನೀರು ಪೂರೈಕೆ ಯೋಜನೆಗೆ ಆಕ್ಷೇಪ ಸರಿಯಲ್ಲ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.