ADVERTISEMENT

2‌.53 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ: ಸಿಎಂ ಬೊಮ್ಮಾಯಿ

karnataka govt jobs 2022

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 5:13 IST
Last Updated 18 ಮಾರ್ಚ್ 2022, 5:13 IST
ವಿಧಾನಸಭೆಯಲ್ಲಿ ಸೋಮವಾರ ನಡೆದ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು
ವಿಧಾನಸಭೆಯಲ್ಲಿ ಸೋಮವಾರ ನಡೆದ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಬೆಂಗಳೂರು: ‘ಸರ್ಕಾರದ 38 ಪ್ರಧಾನ ಇಲಾಖೆಗಳಿಗೆ 7,68,975 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 5,16,073 ಹುದ್ದೆಗಳು ಭರ್ತಿ ಆಗಿವೆ. 2,52,902 ಹುದ್ದೆಗಳು ಖಾಲಿ ಇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೋವಿಡ್ ಪರಿಸ್ಥಿತಿ ನಡುವೆಯೂ, ಅಗತ್ಯ ಸೇವೆಗಳನ್ನು ನೀಡುವ ಶಿಕ್ಷಣ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿಗೆ ನಿರ್ಬಂಧ ವಿಧಿಸಿಲ್ಲ.15 ಸಾವಿರ ಸರ್ಕಾರಿ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ’ ಎಂದರು.

‘ಎರಡು ಲಕ್ಷ ಹುದ್ದೆ ಖಾಲಿ ಇರುವುದರಿಂದ ಸರ್ಕಾರಿ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ. 91 ಸಾವಿರ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ, 57 ಸಾವಿರ ನೌಕರರು ಕೌಶಲರಹಿತರು. ನಿರ್ಣಯ ತೆಗೆದುಕೊಳ್ಳುವ ಹುದ್ದೆಗಳಲ್ಲಿ ಶೇ 30ರಷ್ಟು ಮಂದಿ ಪ್ರಭಾರ ಆಗಿ ಕರ್ತವ್ಯ ನಿಭಾಯಿಸುತ್ತಿದ್ದು, ತೊಂದರೆ ಆಗದಂತೆ ಸಹಕರಿಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಖಾಸಗಿ ಅನುದಾನಿತ ಶಾಲೆಗಳಲ್ಲಿ2015 ಡಿ. 31ರ ಬಳಿಕ ಶಿಕ್ಷಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಆಗಿಲ್ಲ’ ಎಂದು ಶ್ರೀಕಂಠೇಗೌಡ ಹೇಳಿದರು. ಅದಕ್ಕೆ ಮುಖ್ಯಮಂತ್ರಿ, ‘ನೇಮಕಾತಿಗೆ ಹಂತ ಹಂತವಾಗಿ ಅನುಮತಿ ನೀಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.