ADVERTISEMENT

ರಾಜ್ಯದಲ್ಲಿ ಬಂಡವಾಳ ಹೂಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನ

ವಿವಿಧ ದೇಶಗಳ ರಾಯಭಾರಿಗಳಿಗೆ ಬೊಮ್ಮಾಯಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 11 ಮೇ 2022, 19:17 IST
Last Updated 11 ಮೇ 2022, 19:17 IST
   

ಬೆಂಗಳೂರು: ‘ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ. ಈ ರಾಜ್ಯದಲ್ಲಿ ನಿಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ದೇಶಗಳ ರಾಯಭಾರಿಗಳನ್ನು ಉದ್ದೇಶಿಸಿ ಹೇಳಿದರು.

ನವದೆಹಲಿಯಲ್ಲಿ ಮಂಗಳವಾರ ವಿವಿಧ ದೇಶಗಳ ರಾಯಭಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನವೆಂಬರ್‌ನಲ್ಲಿ ‘ಇನ್ವೆಸ್ಟ್‌ ಕರ್ನಾಟಕ 2022’ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಪಾಲ್ಗೊಳ್ಳುವಂತೆ ರಾಯಭಾರಿಗಳಿಗೆ ಆಹ್ವಾನಿಸಿದರು.

ಕೈಗಾರಿಕಾ ಕ್ಷೇತ್ರಗಳಿಗೆ ಅನುಕೂಲ ಮಾಡಲು ರಾಜ್ಯದ ವಿವಿಧ ಕಡೆಗಳಲ್ಲಿ 13 ಹೊಸ ವಿಮಾನ ನಿಲ್ದಾಣ
ಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಉತ್ತಮವಾಗಿದೆ. ಕರ್ನಾಟಕವು ದೇಶದಲ್ಲೇ ಶಾಂತಿಯುತ ರಾಜ್ಯ ಎಂದು ಖ್ಯಾತಿ ಗಳಿಸಿದೆ. ಅಲ್ಲದೇ, ಹೂಡಿಕೆಯ ನೆಚ್ಚಿನ ತಾಣವೂ ಆಗಿದೆ. ಆದ್ದರಿಂದ ಹೂಡಿಕೆದಾರರು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ಬೆಂಗಳೂರು ನವೋದ್ಯಮಗಳ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಮುಖ ನವೋದ್ಯಮಗಳ ಕಚೇರಿಗಳು ಇಲ್ಲಿವೆ. ಐಟಿ ಕಂಪನಿಗಳನ್ನು ಸೆಳೆಯುವಲ್ಲಿ ಸಿಲಿಕಾನ್‌ ಸಿಟಿಗೆ ಬೆಂಗಳೂರು ಪೈಪೋಟಿ ಒಡ್ಡುತ್ತಿವೆ. ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗಾಲಯಗಳು ಕರ್ನಾಟಕದಲ್ಲಿವೆ. 400 ಸಂಶೋಧನಾ ಕೇಂದ್ರಗಳಿದ್ದು, ಅವುಗಳಲ್ಲಿ 180 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಾಗಿವೆ’ ಎಂದು ತಿಳಿಸಿದರು.

ಸಭೆಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ. ರಾಜ್ಯ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.