ADVERTISEMENT

ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 20:05 IST
Last Updated 25 ಜನವರಿ 2022, 20:05 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕೋವಿಡ್‌ ಕಾರಣದಿಂದ ಸಾರಿಗೆ ಇಲಾಖೆಯಲ್ಲಿ ತೆರಿಗೆ ಸಂಗ್ರಹ ಕುಂಠಿತವಾಗಿರುವುದರಿಂದ ವರ್ಷಾಂತ್ಯದೊಳಗೆ ಗುರಿ ತಲುಪುವ ನಿಟ್ಟಿನಲ್ಲಿ ಜಾರಿ ವಿಭಾಗದ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ತೆರಿಗೆ ಸಂಗ್ರಹದ ಕುರಿತು ಮಾಹಿತಿ ಪಡೆದರು. 2021ರ ಡಿಸೆಂಬರ್‌ ಅಂತ್ಯದವರೆಗೆ ನಿಗದಿತ ಗುರಿಗೆ ಹೋಲಿಸಿದಲ್ಲಿ ಶೇಕಡ 80ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕೋವಿಡ್‌ ಮತ್ತಿತರ ಕಾರಣಗಳಿಂದ ತೆರಿಗೆ ಸಂಗ್ರಹದಲ್ಲಿ ಇಳಿಮುಖವಾಗಿರಬಹುದು. ಆದರೆ, ಆರ್ಥಿಕ ವರ್ಷದ ಅಂತ್ಯದೊಳಗೆ ಗುರಿ ಸಾಧಿಸಲೇಬೇಕು. ಅದಕ್ಕಾಗಿ ಇಲಾಖೆಯ ಜಾರಿ ವಿಭಾಗ ಚುರುಕಾಗಬೇಕು. ಮೋಟಾರು ವಾಹನ ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಿ ಬಾಕಿ ಮತ್ತು ದಂಡ ವಸೂಲಿ ಮಾಡಬೇಕು ಎಂಬ ನಿರ್ದೇಶನವನ್ನು ಮುಖ್ಯಮಂತ್ರಿ ನೀಡಿದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹುದ್ದೆ ಭರ್ತಿಗೆ ಕ್ರಮ: ಸಾರಿಗೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಜಾಸ್ತಿಯಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ತೀವ್ರವಾಗಿರುವ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿದೆ. ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಕೋರಿದ್ದಾರೆ ಎಂಬ ಮಾಹಿತಿ ಲಭಿಸಿದೆ.

‘ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಅದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಇತರ ಖಾಲಿ ಹುದ್ದೆಗಳ ಭರ್ತಿ ಬಗ್ಗೆಯೂ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಸಾರಿಗೆ ಸಚಿವ ಬಿ. ಶ್ರೀರಾಮುಲು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಆಯುಕ್ತ ಎನ್‌. ಶಿವಕುಮಾರ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.