ADVERTISEMENT

ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಸಹಕಾರ: ಸಿಎಂ ಬಿಎಸ್‌ವೈ ಭರವಸೆ

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಜಾಲತಾಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 20:51 IST
Last Updated 10 ಜೂನ್ 2020, 20:51 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಬೆಂಗಳೂರಿನಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿಯ ಲಾಂಛನ ಬಿಡುಗಡೆಗೊಳಿಸಿದರು. ಮಂಡಳಿಯ ಅಧ್ಯಕ್ಷ ಹಳೇಬೀಡು ಶ್ಯಾಮಣ್ಣ ಸಚ್ಚಿದಾನಂದಮೂರ್ತಿ, ಸಂಸದ ತೇಜಸ್ವಿ ಸೂರ್ಯ, ಸಚಿವರಾದ ಆರ್.ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಆರ್‌.ವಿ.ದೇಶಪಾಂಡೆ, ಎಸ್‌. ಎ. ರಾಮದಾಸ್‌ ಇದ್ದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಬೆಂಗಳೂರಿನಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿಯ ಲಾಂಛನ ಬಿಡುಗಡೆಗೊಳಿಸಿದರು. ಮಂಡಳಿಯ ಅಧ್ಯಕ್ಷ ಹಳೇಬೀಡು ಶ್ಯಾಮಣ್ಣ ಸಚ್ಚಿದಾನಂದಮೂರ್ತಿ, ಸಂಸದ ತೇಜಸ್ವಿ ಸೂರ್ಯ, ಸಚಿವರಾದ ಆರ್.ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಆರ್‌.ವಿ.ದೇಶಪಾಂಡೆ, ಎಸ್‌. ಎ. ರಾಮದಾಸ್‌ ಇದ್ದರು.   

ಬೆಂಗಳೂರು: ‘ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ ಅಂದಾಜು ಶೇ 3ರಷ್ಟಿದ್ದು, ಈ ಸಮುದಾಯದ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ಇಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಲಾಂಛನ ಮತ್ತು ಜಾಲತಾಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾರಾಸಗಟಾಗಿ ಮುಂದುವರಿದ ಸಮುದಾಯ ಎಂದು ಯಾವುದೇ ಒಂದು ಸಮುದಾಯವನ್ನು ಹೇಳಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳಲ್ಲೂ ಮುಂದುವರಿದವರು ಮತ್ತು ಹಿಂದುಳಿದವರು ಇರುತ್ತಾರೆ. ಅದೇ ರೀತಿ ಪಾರಂಪರಿಕವಾಗಿ ಬ್ರಾಹ್ಮಣ ಸಮುದಾಯವನ್ನು ಮುಂದುವರಿದ ಸಮುದಾಯ ಎಂದು ಗುರುತಿಸಿದ್ದರೂ, ಆರ್ಥಿಕವಾಗಿ ಅಶಕ್ತರಾಗಿರುವ ಹಲವಾರು ಮಂದಿ ಈ ಸಮುದಾಯದಲ್ಲಿರುವುದು ಸರ್ಕಾರದ ಗಮನದಲ್ಲಿ ಇದೆ’ ಎಂದರು.

ADVERTISEMENT

‘ಅಶಕ್ತರಾದ ಬ್ರಾಹ್ಮಣರು ಆರ್ಥಿಕವಾಗಿ ಸಶಕ್ತರಾಗಲು ಮಂಡಳಿಯ ವತಿಯಿಂದ ಅನೇಕ ವಿಭಿನ್ನ ಯೋಜನೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಶಿಕ್ಷಣ, ಕೌಶಲಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಸುಧಾರಿಸಲು ಯೋಜನೆಗಳು ಸಹಕಾರಿಯಾಗಲಿವೆ. ಅನಾಥ, ನಿರಾಶ್ರಿತ ಅಂಗವಿಕಲ, ವಿಧವೆಯರು, ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ, ವೃದ್ಧಾಶ್ರಮ, ವೈದ್ಯಕೀಯ ತಪಾಸಣೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶ ಸ್ವಾಗತಾರ್ಹ‘ ಎಂದರು.

ಮಂಡಳಿಯ ಅಧ್ಯಕ್ಷ ಹಳೇಬೀಡು ಶ್ಯಾಮಣ್ಣ ಸಚ್ಚಿದಾನಂದ ಮೂರ್ತಿ ಅವರ ನೇತೃತ್ವದಲ್ಲಿ ಸಮುದಾಯ ಸರ್ವತೋಮುಖ ಅಭಿವೃದ್ಧಿ ಹೊಂದುವ ಆಶಯ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.