ADVERTISEMENT

ಮೂರನೇ ಅಲೆ ಎದುರಿಸಲು ಸಜ್ಜಾಗಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಎಂ ಕರೆ

ಅಂಗನವಾಡಿ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 18:01 IST
Last Updated 9 ಜೂನ್ 2021, 18:01 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ    

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀಡುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಮಕ್ಕಳ ರಕ್ಷಣೆ ದೃಷ್ಟಿಯಿಂದ ಮೂರನೆ ಅಲೆ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಬುಧವಾರ ವಿಡಿಯೊ ಸಂವಾದ ನಡೆಸಿದ ಅವರು, ‘ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳಲ್ಲಿ ಸೋಂಕು ಹರಡದಂತೆ ನಿಯಂತ್ರಿಸಬೇಕು’ ಎಂದು ಸಲಹೆ ನೀಡಿದರು.

ಕೋವಿಡ್‌ ನಿಯಂತ್ರಣಕ್ಕಾಗಿ ಮನೆ ಮನೆ ಭೇಟಿ, ಜಾಗೃತಿ ಮೂಡಿಸುವುದು, ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಮನೆಗಳಿಗೇ ಪೌಷ್ಟಿಕ ಆಹಾರ ಸಾಮಗ್ರಿ ತಲುಪಿಸುವುದು, ಗ್ರಾಮ ಮಟ್ಟದ ಕೋವಿಡ್‌ ಕಾರ್ಯಪಡೆ ಕೆಲಸ ಸೇರಿದಂತೆ ಅಂಗನವಾಡಿ ಕಾರ್ಯ
ಕರ್ತೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಎಲ್ಲರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಲ್ಲಿ ಶೇಕಡ 85.91ರಷ್ಟು ಮಂದಿ ಕೋವಿಡ್‌ ಲಸಿಕೆ ಪಡೆದಿರುವುದು ಸಂತೋಷದ ಸಂಗತಿ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನೂ ‘ಕೊರೊನಾ ವಾರಿಯರ್‌’ ಎಂದು ಘೋಷಿಸಲಾಗಿದೆ. ಕೋವಿಡ್‌ ಮೊದಲ ಅಲೆಯಲ್ಲಿ 20 ಮಂದಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ತಲಾ ₹ 30 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪತಿ ಕಳೆದುಕೊಂಡ ಕಾರ್ಯಕರ್ತೆಗೆ ಸಾಂತ್ವನ

ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡಿರುವ ಬೆಂಗಳೂರಿನ ಭುವನೇಶ್ವರಿನಗರದ ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಅವರಿಗೆ ಯಡಿಯೂರಪ್ಪ ಅವರು ವಿಡಿಯೊ ಸಂವಾದದ ವೇಳೆ ಸಾಂತ್ವನ ಹೇಳಿದರು.

‘ಕುಟುಂಬದ ನಾಲ್ವರಿಗೂ ಕೋವಿಡ್‌ ತಗುಲಿತ್ತು. ಮೂವರು ಗುಣಮುಖರಾಗಿ ಬಂದೆವು. ಪತಿ ಮೃತರಾದರು’ ಎಂದು ಗಿರಿಜಾ ನೋವು ತೋಡಿಕೊಂಡರು. ಬೆಳಗಾವಿ ಜಿಲ್ಲೆಯ ಮಂಜುಳಾ ಸಂಗಮೇಶ್‌ ಅವರ ಕ್ಷೇಮ ವಿಚಾರಿಸಿದ ಯಡಿಯೂರಪ್ಪ, ‘ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಬಂದು ಕಾಫಿ ಕುಡಿದು ಹೋಗಿ’ ಎಂದು ಆಹ್ವಾನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.