ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದವರಿಗೆ ‘ಸರ್ಕಾರಿ ನೌಕರರ ದಿನಾಚರಣೆ’ಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು.
ಬೆಂಗಳೂರು: ‘ಸರ್ಕಾರಿ ನೌಕರರು ಜನರನ್ನು ವಿನಾ ಕಾರಣ ಅಲೆದಾಡಿಸಬಾರದು. ನಿಮ್ಮಲ್ಲಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಿವಿಮಾತು ಹೇಳಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘವು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ, ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಕೆಲಸ ಹೇಗೆ ಆಗುತ್ತದೆ ಎಂಬ ಎಲ್ಲ ವಿವರ ಸರ್ಕಾರಿ ನೌಕರನಿಗೆ ಇರುತ್ತದೆ. ಆದರೂ ಆ ದಾಖಲೆ, ಈ ದಾಖಲೆ ತೆಗೆದುಕೊಂಡು ಬನ್ನಿ ಎಂದು ಸಾರ್ವಜನಿಕರನ್ನು ಅಲೆಸುತ್ತಾರೆ. ಸಾರ್ವಜನಿಕರು ತಮಗೆ ಸಲಾಂ ಹೊಡೆಯಬೇಕು, ಕಡಲೆ ಕಾಯಿ, ಹಣ್ಣು, ಕೋಳಿ ತಂದುಕೊಡಬೇಕು ಎನ್ನುವ ಧೋರಣೆ ಇತ್ತು. ನೀವ್ಯಾರೂ ಈ ರೀತಿ ಮಾಡಬಾರದು’ ಎಂದರು.
‘ನಾವು ರಾಜಕಾರಣಿಗಳು ಐದು ವರ್ಷದ ನಂತರ ಮನೆಗೆ ಹೋಗುತ್ತೇವೆ. ಸರ್ಕಾರಿ ನೌಕರರು 60 ವರ್ಷವಾಗುವವರೆಗೂ ಜನರ ಸೇವೆ ಮಾಡಬಹುದು. ಎಲ್ಲರಿಗೂ ಅಂತಹ ಅವಕಾಶ ಸಿಗುವುದಿಲ್ಲ. ನಿಮಗೆ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಜನರು ನಿಮ್ಮನ್ನು ನೆನಪಿಸಿಕೊಳ್ಳುವಂತಹ ಕೆಲಸ ಮಾಡಬೇಕು’ ಎಂದು ತಿಳಿ ಹೇಳಿದರು.
‘ಇಂದಿರಾ ಗಾಂಧಿ ಅವರ ಹತ್ಯೆಯಾಗಿದ್ದ ಸಂದರ್ಭ. ಪುಟ್ಟರಂಗಪ್ಪ ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದರು. ನಾನು ಚಿತ್ರಮಂದಿರ ಪರವಾನಗಿ ಪಡೆಯಲು ಹೋಗಿದ್ದೆ. ರಜೆ ಘೋಷಣೆ ಆಗಬಹುದು ಎಂದು ಒಂದೇ ದಿನದಲ್ಲಿ ಕೆಲಸ ಮಾಡಿಕೊಟ್ಟಿದ್ದರು. ಹೀಗೆ ಜನರಿಗೆ ಅನುಕೂಲವಾಗುವ ಹಾಗೆ ತ್ವರಿತವಾಗಿ ಕೆಲಸ ಮಾಡುವ ಎಲ್ಲ ಸಾಧ್ಯತೆಗಳು ಸರ್ಕಾರಿ ನೌಕರರಿಗೆ ಇದೆ. ಅದನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕು’ ಎಂದರು.
‘ಶಾಸಕಾಂಗ ತೀರ್ಮಾನ ಮಾಡಿದ್ದನ್ನು, ಜಾರಿಗೆ ತರುವವರೇ ನೀವು ಅಂದರೆ (ಸರ್ಕಾರಿ ನೌಕರರು) ಕಾರ್ಯಾಂಗ. ನೀವು, ನಾವು ತಪ್ಪು ಮಾಡಿದರೆ ನಮ್ಮನ್ನು ತಿದ್ದುವುದು ನ್ಯಾಯಾಂಗ. ನಾವು ತಪ್ಪು ಮಾಡಿದರೆ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ನಮ್ಮ ತಪ್ಪಿನ ಬಗ್ಗೆ ಬರೆದಾಗ, ಕೋಪಿಸಿಕೊಳ್ಳಬಾರದು. ಬದಲಿಗೆ ತಪ್ಪು ತಿದ್ದಿಕೊಳ್ಳಬೇಕು’ ಎಂದರು.
‘ಸಂವಿಧಾನವನ್ನು ಪಾಲಿಸಿ’: ‘ಸಂವಿಧಾನದ ಆಶಯವನ್ನು ಈಡೇರಿಸುವುದೇ ಪ್ರಜಾಪ್ರಭುತ್ವದ ನಾಲ್ಕು ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳ ಕೆಲಸ. ಸಂವಿಧಾನದ ಆಶಯದಂತೆ ಜಾತ್ಯತೀತ ಸಮಾಜ ನಿರ್ಮಿಸಿ, ಜಾತಿ ಅಸಮಾನತೆಯನ್ನು ಅಳಿಸಬೇಕು. ಬುದ್ಧ, ಬಸವ, ಗಾಂಧಿ ಹೇಳಿದ್ದನ್ನೇ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಎಲ್ಲರೂ ಸಂವಿಧಾನ ಪಾಲಿಸಿ, ಕರ್ತವ್ಯ ನಿರ್ವಹಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.