ADVERTISEMENT

ಕೇಂದ್ರಕ್ಕೆ ಗುರು ಇಲ್ಲ, ಗುರಿಯೂ ಇಲ್ಲ: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 10:43 IST
Last Updated 23 ಫೆಬ್ರುವರಿ 2019, 10:43 IST
   

ರಾಯಚೂರು: ಕೇಂದ್ರ ಸರ್ಕಾರದ ಹಿಂದೆ ಗುರುವೂ ಇಲ್ಲ, ಸಾಧನೆ ಮಾಡುವುದಕ್ಕೆ ಮುಂದೆ ಗುರಿಯೂ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಟೀಕಿಸಿದರು.

ನಗರದಲ್ಲಿ ಶನಿವಾರ ಆಯೋಜಿಸಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಲ್ಕುವರೆ ವರ್ಷಗಳಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ಆರು ಕೋಟಿ ಯುವಕರು ನಿರುದ್ಯೋಗಿಗಳಾಗಿ ಅಲೆಯುವ ಪರಿಸ್ಥಿತಿ ಬಂದಿದೆ. ನೋಟು ರದ್ದತಿಯಿಂದಾಗಿ ಎಷ್ಟು ಕಪ್ಪು ಹಣ ಬಂತು ಎಂಬುದರ ವಿವರವನ್ನು ಪ್ರಧಾನಿ ಈಗಲೂ ನೀಡಿಲ್ಲ. ಕೃಷಿ ಆಧಾರಿತವಾಗಿರುವ ದೇಶದ ಆರ್ಥಿಕ ವ್ಯವಸ್ಥೆ ಆಧೋಗತಿಗೆ ತಲುಪಿದೆ ಎಂದು ಹೇಳಿದರು.

ADVERTISEMENT

ಪುಲ್ವಾಮಾ ಉಗ್ರರು ದೇಶದೊಳಗೆ ಹೇಗೆ ನುಸುಳಿದರು. ಅವರ ಕೈಯಲ್ಲಿ ಆರ್‌ಡಿಎಕ್ಸ್‌ ಹೇಗೆ ಬಂತು ಎಂಬುದನ್ನು ಪ್ರಧಾನಿ ಬಯಲು ಮಾಡಬೇಕು. ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದಕ್ಕೆ ಆಸೆ ಇಟ್ಟುಕೊಳ್ಳಬೇಕು. ದುರಾಸೆ ಇಟ್ಟುಕೊಳ್ಳಬಾರದು. ಆಪರೇಷನ್‌ಗಳು ಫೇಲ್‌ ಆಗಿವೆ. ಆಪರೇಷನ್‌ಗೆ ಬಳಸುವ ಹಣವನ್ನು ರಾಜ್ಯದಲ್ಲಿ ಬರಗಾಲ ಎದುರಿಸುತ್ತಿರುವ ಜನರು ಕಲ್ಯಾಣಕ್ಕಾಗಿ ಬಳಸಲಿ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವನ್ನು ಸಭೆ ಮೂಲಕ ಬಗೆಹರಿಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ಬಿಜೆಪಿ ಎರಡು ಸ್ಥಾನಗಳನ್ನಾದರೂ ಗೆಲ್ಲಲಿ: ಖಂಡ್ರೆ ಸವಾಲು
‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನಾದರೂ ಗೆಲ್ಲಲಿ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸವಾಲು ಹಾಕಿದರು.

ನಗರದಲ್ಲಿ ಆಯೋಜಿಸಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ವಿರೋಧ ಪಕ್ಷವಾದ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ. ಅವರೆಲ್ಲ ಸರ್ಕಾರ ಉರುಳಿಸುವ ಹಗಲುಗನಸು ಕಾಣುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.