ADVERTISEMENT

ಜೆಡಿಎಸ್‌ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 6:01 IST
Last Updated 17 ಏಪ್ರಿಲ್ 2022, 6:01 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ನೇಮಕಗೊಂಡಿದ್ದಾರೆ. ಹಾಲಿ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಅವರನ್ನು ಪಕ್ಷದ ಸಂಸದೀಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಪಕ್ಷದ ಕಚೇರಿಯಲ್ಲಿ ಭಾನುವಾರ ಪದಗ್ರಹಣ ನಡೆಯಿತು. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಇದ್ದರು.

ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾಗಿದ್ದ ಸಿ.ಎಂ. ಇಬ್ರಾಹಿಂ ಅವರು, ಪರಿಷತ್‌ ವಿರೋಧ ಪಕ್ಷದ ಸ್ಥಾನ ಕೈತಪ್ಪಿದ ಕಾರಣಕ್ಕೆ ಮುನಿಸಿಕೊಂಡು ಇತ್ತೀಚೆಗೆ ಜೆಡಿಎಸ್‌ ಸೇರಿದ್ದರು.

ADVERTISEMENT

ಪಕ್ಷದ ಅಧ್ಯಕ್ಷ ಸ್ಥಾನವನ್ನು ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದ ಬಳಿಕ ಮಾತನಾಡಿದ ಎಚ್‌.ಕೆ. ಕುಮಾರಸ್ವಾಮಿ, ‘ರಾಜ್ಯದ ಜನ ಮೂರನೇ ಶಕ್ತಿಗಾಗಿ ಕಾಯುತ್ತಿದ್ದಾರೆ. ಜೆಡಿಎಸ್‌ ಪರ ಜನರ ಒಲವು ಇದೆ. ಹೀಗಾಗಿ, ಎಲ್ಲರೂ ಸೇರಿ ಪಕ್ಷವನ್ನು ಬಲಪಡಿಸಬೇಕು’ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.

ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ‘ಎರಡೂವರೆ ವರ್ಷಗಳ ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಎಚ್‌.ಕೆ. ಕುಮಾರಸ್ವಾಮಿ ಅವರು ಪಕ್ಷದಲ್ಲಿ ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗಿದ್ದಾರೆ. ಸಿ.ಎಂ. ಇಬ್ರಾಹಿಂ ಅವರು ಪಕ್ಷಕ್ಕೆ ಮರಳಿ ಬಂದಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಪ‍ಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.