ADVERTISEMENT

ಪ್ರಾಣಿ ಕಲ್ಯಾಣ ಸಹಾಯವಾಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:45 IST
Last Updated 23 ಜೂನ್ 2021, 19:45 IST
ಪ್ರಾಣಿ ಕಲ್ಯಾಣ ವಾರ್‌ರೂಂ ವೀಕ್ಷಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ಸಚಿವ ಪ್ರಭು ಚವ್ಹಾಣ ಇದ್ದರು
ಪ್ರಾಣಿ ಕಲ್ಯಾಣ ವಾರ್‌ರೂಂ ವೀಕ್ಷಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ಸಚಿವ ಪ್ರಭು ಚವ್ಹಾಣ ಇದ್ದರು   

ಬೆಂಗಳೂರು:ಜಾನುವಾರು ಸಾಕಾಣಿಕೆದಾರರಿಗೆ ಕಾಲಕಾಲಕ್ಕೆ ಮಹತ್ವದ ಮಾಹಿತಿಗಳನ್ನು ನೀಡಲು ಪಶುಸಂಗೋಪನಾ ಇಲಾಖೆ ‘ಪ್ರಾಣಿ ಕಲ್ಯಾಣ ಸಹಾಯವಾಣಿ’ಯನ್ನು ಆರಂಭಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಹಾಯವಾಣಿಯ ಮೂಲಕ ಪಶುಪಾಲನೆಯಲ್ಲಿ ತೊಡಗಿರುವ ರೈತರು ಮತ್ತು ಸಾಕಾಣಿಕೆದಾರಿಗೆ ಅಗತ್ಯ ಮಾಹಿತಿ ನೀಡಿ ಉತ್ಪಾದತೆ ಹೆಚ್ಚಿಸಲು ಮತ್ತು ಜಾನುವಾರುಗಳ ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ಪಶು ಸಾಕಾಣಿಕೆದಾರರ ಪಾಲಿಗೆ ಇದು ವಾರ್‌ರೂಂ ಆಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಇಂತಹದ್ದೊಂದು ಸೌಲಭ್ಯ ದೇಶದಲ್ಲೇ ಪ್ರಥಮ ಎಂದು ಹೇಳಿದರು.

ADVERTISEMENT

ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ವಾರ್‌ರೂಂ ಮಹತ್ವದ ಕಾರ್ಯವಹಿಸಲಿದೆ. ಇದರ ಪ್ರಯೋಜನವನ್ನು ಎಲ್ಲ ಜಾನುವಾರು ಸಾಕಣೆದಾರರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತೆ ಕ್ರಮವಾಗಿ ಚುಚ್ಚುಮದ್ದು ಹಾಕಿಸಬೇಕಾದ ವಿವರ, ಬ್ಯಾಂಕುಗಳಿಂದ ವಿವಿಧ ಸಾಲಸೌಲಭ್ಯಗಳ ಮಾಹಿತಿ, ಮಿಶ್ರತಳಿ ಹೈನುರಾಸುಗಳು, ಕುರಿ, ಹಂದಿಗಳು ದೊರೆಯುವ ಸ್ಥಳಗಳು ಮತ್ತು ಅವುಗಳ ಅಂದಾಜಿನ ಬೆಲೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ತುರ್ತು ಸಮಯ, ಅಪಘಾತ ಮತ್ತು ಇತರೆ ಕಾಯಿಲೆಗಳಿಂದ ನರಳುತ್ತಿರುವ ರಸುಗಳಿಗೆ ಚಿಕಿತ್ಸೆ ನೀಡಲು ಪಶುವೈದ್ಯರು ಸಿಗದಿದ್ದಾಗ, ಚಿಕಿತ್ಸೆ ಬಗ್ಗೆ ಸಲಹೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 8277100200

₹45 ಲಕ್ಷದ ವಾರ್‌ರೂಂ

l ಹೆಬ್ಬಾಳದಲ್ಲಿರುವ ಪಶುಪಾಲನಾ ಭವನದಲ್ಲಿ ₹45 ಲಕ್ಷ ವೆಚ್ಚದಲ್ಲಿ ವಾರ್‌ರೂಂ ಸ್ಥಾಪಿಸಲಾಗಿದೆ

l ಜಾನುವಾರುಗಳ ರೋಗ, ಪ್ರಕೃತಿ ವಿಕೋಪ ಮತ್ತು ಮಾನವನಿಂದ ಜಾನುವಾರುಗಳಿಗೆ ಉಂಟಾಗಬಹುದಾದ ಹಾನಿ ಮತ್ತು ಕ್ರೌರ್ಯಗಳಿಂದ ಜಾನುವಾರುಗಳನ್ನು ರಕ್ಷಿಸಲು ಮತ್ತು ಅವುಗಳ ಆರೋಗ್ಯ ಕಾಪಾಡಲು ಪ್ರಾಣಿ ಕಲ್ಯಾಣ ಸಹಾಯವಾಣಿ ಮುಡಿಪಾಗಿದೆ.

l ಈ ಸಹಾಯವಾಣಿಯು ದೂರವಾಣಿ, ವಾಟ್ಸ್‌ ಆ್ಯಪ್, ಟ್ವಿಟರ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಇ–ಮೇಲ್‌
ಇತ್ಯಾದಿಗಳ ಮೂಲಕ ಸ್ವೀಕರಿಸಿದ ಕರೆ, ದೂರು, ಪ್ರಶ್ನೆಗಳ ಸಂಖ್ಯೆಗಳು ಮತ್ತು ಈ ಕುರಿತು ಕೈಗೊಂಡ ಕ್ರಮಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರತಿ ದಿನವೂ ಅಂಕಿ–ಅಂಶಗಳನ್ನು ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.