ADVERTISEMENT

ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಅಸಮಾಧಾನ

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಜಾಹೀರಾತು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:15 IST
Last Updated 16 ಫೆಬ್ರುವರಿ 2019, 20:15 IST

ಬೆಂಗಳೂರು: ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಷ್ಟೇ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಧಾನಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2018ರ ಮಾರ್ಚ್‌ 2ರಂದು ‘ಆರೋಗ್ಯ ಕರ್ನಾಟಕ’ ಯೋಜನೆಗೆ ಚಾಲನೆ ನೀಡಿತು. ಈ ಯೋಜನೆಯಡಿ ಬಿಪಿಎಲ್‌ ಕುಟುಂಬದವರಿಗೆ ವರ್ಷಕ್ಕೆ ₹2 ಲಕ್ಷದ ಚಿಕಿತ್ಸೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ 2018ರ ಮಾರ್ಚ್‌ 21ರಂದು ‘ಆಯುಷ್ಮಾನ್‌ ಭಾರತ್‌–ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ’ ಆರಂಭಿಸಿತು. ಈ ಯೋಜನೆಯಡಿ ದೇಶದ 10 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ. ಬಳಿಕ ‘ಆಯುಷ್ಮಾನ್‌ ಭಾರತ– ಆರೋಗ್ಯ ಕರ್ನಾಟಕ’ ಯೋಜನೆ ವಿಲೀನ ಮಾಡಲಾಯಿತು. ರಾಜ್ಯದಲ್ಲಿ ಬಿಪಿಎಲ್‌ ಕುಟುಂಬಗಳು 1.20 ಕೋಟಿ ಇವೆ. ಕೇಂದ್ರ ಪ್ರಾಯೋಜಿತ ಯೋಜನೆಯಡಿ 62.2 ಲಕ್ಷ ಕುಟುಂಬಗಳಿಗೆ ಲಾಭ ಸಿಗುತ್ತಿತ್ತು. ವಿಲೀನಗೊಂಡ ಬಳಿಕ ಯೋಜನೆಗೆ ರಾಜ್ಯ ಸರ್ಕಾರ ₹139 ಕೋಟಿ ಭರಿಸಿದ್ದರೆ, ಕೇಂದ್ರ ಸರ್ಕಾರ ಕೊಟ್ಟಿದ್ದು ₹22 ಕೋಟಿ ಮಾತ್ರ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಯೋಜನೆಯ ಫಲಾನುಭವಿಗಳಿಗೆ ಪ್ರಧಾನಿ ಅವರು ಇತ್ತೀಚೆಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯ ಬಗ್ಗೆ ಮಾತ್ರ ಉಲ್ಲೇಖ ಇದೆ. ಇದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಈ ಕಾರ್ಯಕ್ರಮದ ಬಗ್ಗೆ ಜಾಹೀರಾತು ನೀಡುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತಗಾರರ ಭಾವಚಿತ್ರಗಳನ್ನು ಪ್ರಕಟಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದನ್ನು ಕಡೆಗಣಿಸಲಾಗಿದೆ. ಜತೆಗೆ, ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪತ್ರ ಬರೆಯಲಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.