ADVERTISEMENT

ತೆರಿಗೆ ಸಂಗ್ರಹ ಗುರಿ ಮುಟ್ಟಲೇಬೇಕು: ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:35 IST
Last Updated 17 ಮೇ 2025, 15:35 IST
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು   

ಬೆಂಗಳೂರು: ‘ಈ ಆರ್ಥಿಕ ವರ್ಷದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹಕ್ಕೆ ನೀಡಲಾಗಿರುವ ಗುರಿಯನ್ನು ಮುಟ್ಟಲೇಬೇಕು. ಈ ಹೊಣೆಗಾರಿಕೆಯನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಅಧಿಕಾರಿಗಳ ಸಂಘದ ಸುವರ್ಣ ಮಹೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ತೆರಿಗೆ ಸಂಗ್ರಹ ಸರಿಯಾಗಿ ಆದರಷ್ಟೇ ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತದೆ. ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಲೋಪವಿದೆ ಮತ್ತು ತೆರಿಗೆ ಸೋರಿಕೆಯಾಗುತ್ತಿದೆ. ಇದನ್ನು ನೀವೂ ಒಪ್ಪುತ್ತೀರಿ, ನಾನೂ ಒಪ್ಪುತ್ತೇನೆ. ಆದರೆ ಅದನ್ನು ತಡೆಯುವ ಹೊಣೆಗಾರಿಕೆ ನಿಮ್ಮ ಮೇಲಿದೆ’ ಎಂದರು.

‘ಸೋರಿಕೆ ನಿಲ್ಲಿಸಿದರಷ್ಟೇ ಗುರಿ ನೀಡಿರುವಷ್ಟು ತೆರಿಗೆಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯನ್ನು ಬಲಪಡಿಸುವ ಸಲುವಾಗಿ ಅಗತ್ಯವಿರುವಷ್ಟು ವಾಹನ, ಸಿಬ್ಬಂದಿ ಮತ್ತು ಸವಲತ್ತುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸರಿಯಾಗಿ ಕೆಲಸ ಮಾಡಬೇಕು’ ಎಂದರು.

ADVERTISEMENT

‘ನಾನು ಈ ಹಿಂದೆ ಹಣಕಾಸು ಮಂತ್ರಿಯಾಗಿದ್ದಾಗ ತೆರಿಗೆ ಸಂಗ್ರಹದ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದೆ. ಈಗ ಮುಖ್ಯಮಂತ್ರಿಯ ಹೊಣೆಗಾರಿಕೆ ಇರುವುದರಿಂದ ಅಷ್ಟು ಸಮಯ ನೀಡಲಾಗುತ್ತಿಲ್ಲ. ತೆರಿಗೆ ಸಂಗ್ರಹ ಗುರಿ ಮುಟ್ಟಲು, ಗರಿಷ್ಠ ಮಟ್ಟದಲ್ಲಿ ತೆರಿಗೆ ಸಂಗ್ರಹಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದರು.

‘ವಾಣಿಜ್ಯ ಇಲಾಖೆಗೆ ಈ ಸಾಲಿನಲ್ಲಿ ₹1.20 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ. ಆ ಗುರಿಯನ್ನು ಮುಟ್ಟಿ, ನೀವು ಸಲ್ಲಿಸಿರುವ ಹಲವು ಬೇಡಿಕೆಗಳನ್ನು ಈಡೇರಿಸುತ್ತೇವೆ. ಗುರಿ ನೀಡಿದ ತೆರಿಗೆ ಸಂಗ್ರಹಿಸಿಕೊಟ್ಟರೆ, ನಿಮಗಾಗಿ ನಾಲ್ಕೈದು ಕೋಟಿ ರೂಪಾಯಿ ವೆಚ್ಚ ಮಾಡುವುದು ಸರ್ಕಾರಕ್ಕೆ ದೊಡ್ಡ ವಿಷಯವೇನಲ್ಲ’ ಎಂದರು.

‘ನಿಮ್ಮ ಸಂಘದ ವತಿಯಿಂದ ಒಂದು ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದೀರಿ. ಅದನ್ನು ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ವೇತನ ತಾರತಮ್ಯವನ್ನು ನಿವಾರಿಸುತ್ತೇವೆ. ನಿಮ್ಮ ಕೆಲಸದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅಧಿಕಾರಿಗಳು ಹೊಣೆಗಾರಿಕೆ ಮರೆತು, ಕೆಲಸ ಮಾಡದೇ ಇದ್ದರೆ ಖಂಡಿತವಾಗಿಯೂ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.

ಅತಿಹೆಚ್ಚು ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕವು ಈಗ 2ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ತರಬೇಕು.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.