ADVERTISEMENT

ಕರ್ತವ್ಯಕ್ಕೆ ತಡ: ತರಾಟೆ ತೆಗೆದುಕೊಂಡ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:14 IST
Last Updated 1 ಆಗಸ್ಟ್ 2019, 19:14 IST
ವಿಧಾನಸೌಧದ ಕಚೇರಿಯೊಂದಕ್ಕೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ.
ವಿಧಾನಸೌಧದ ಕಚೇರಿಯೊಂದಕ್ಕೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ.   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಬೆಳಿಗ್ಗೆ ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್‌ ಭೇಟಿ ನೀಡಿ ಕಡಿಮೆ ಸಂಖ್ಯೆಯಲ್ಲಿದ್ದ ಸಿಬ್ಬಂದಿಗೆ ಅಚ್ಚರಿ ಮೂಡಿಸಿದರು.

ಬೆಳಿಗ್ಗೆ 10.45 ಆಗಿದ್ದರೂ ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಇರುವುದನ್ನು ನೋಡಿ ಅವರು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಕಚೇರಿಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಇನ್ನು ಮುಂದೆ ಯಾರೇ ತಡವಾಗಿ ಬಂದರೂ ಸಹಿಸಲು ಸಾಧ್ಯವಿಲ್ಲ. ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ಶಿಸ್ತು ಕ್ತಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ’ ಎಂದೂ ಯಡಿಯೂರಪ್ಪ ಹೇಳಿದರು.

ADVERTISEMENT

ಈ ಹಿಂದಿನ ಸರ್ಕಾರಗಳಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಬಹುತೇಕ ಎಲ್ಲ ಸಚಿವರು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವುದು ಅಪರೂಪವಾಗಿತ್ತು. ಇದರಿಂದ ವಿಧಾನಸೌಧದ ಸಚಿವಾಲಯದಲ್ಲಿ ಸಿಬ್ಬಂದಿ ಮುತುವರ್ಜಿ ವಹಿಸಿ ಕೆಲಸ ಮಾಡುವುದು ಕಡಿಮೆ ಆಗಿದೆ. ಕೆಲವರು ತಡವಾಗಿ ಬಂದರೆ, ಇನ್ನು ಕೆಲವರು ಬಯೋಮೆಟ್ರಿಕ್‌ ಹಾಜರಿ ಹಾಕಿ, ಕರ್ತವ್ಯಕ್ಕೆ ಹಾಜರಾಗದೇ ಬೇರೆಡೆ ಹೋಗುತ್ತಿದ್ದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಎಲ್ಲ ಸಚಿವರು ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಿದರೆ, ಸಿಬ್ಬಂದಿಯಲ್ಲೂ ಶಿಸ್ತು ಮೂಡುತ್ತದೆ. ತಮ್ಮ ಮನೆಗಳಲ್ಲಿ ಅಥವಾ ಇತರೆ ಕಡೆಗಳಲ್ಲಿ ಕುಳಿತು ಕೆಲಸ ಮಾಡಿದರೆ, ಆಡಳಿತದಲ್ಲಿ ಬಿಗಿ ಇರುವುದಿಲ್ಲ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.