ADVERTISEMENT

ದೇವೇಗೌಡರಿಗೆ ಸಿ.ಎಂ ಉತ್ತರ ಕೊಡ್ತಾರೆ: ಬಿ.ಸಿ ನಾಗೇಶ್‌

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 20:46 IST
Last Updated 22 ಜೂನ್ 2022, 20:46 IST
   

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಗೊಂದಲಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬರೆದ ಪತ್ರಕ್ಕೆ ಮುಖ್ಯಮಂತ್ರಿಯವರೇ ಉತ್ತರ ನೀಡಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಬುಧವಾರ ರಾತ್ರಿ ನಡೆದ ಸಭೆಯ ಬಳಿಕ
ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ದೇವೇಗೌಡರ ಪತ್ರಕ್ಕೆ ವಿವರಣೆ ಕೇಳಲು ಬೊಮ್ಮಾಯಿ ಈ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಗೌಡರ ಪತ್ರದಲ್ಲಿದ್ದ ಎಲ್ಲ ಸಂದೇಹಗಳಿಗೂ ಉತ್ತರ ನೀಡಿದ್ದೇವೆ. ಇನ್ನೂ ಒಂದೆರಡು ವಿಷಯಗಳ ಬಗ್ಗೆ ಸಿಎಂ ಸ್ಪಷ್ಟನೆ ಕೇಳಿದ್ದು, ಗುರುವಾರ ಬೆಳಿಗ್ಗೆ ಆ ಮಾಹಿತಿಯನ್ನೂ ನೀಡುತ್ತೇವೆ. ಆ ಬಳಿಕ ಅವರು ಸುದೀರ್ಘ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಇವತ್ತಿನ ಸಭೆ ನಡೆದಿದ್ದು ದೇವೇಗೌಡರ ಪತ್ರದ ವಿಚಾರವಾಗಿ ಮಾತ್ರ. ಈ ಹಿಂದೆ ಯಾರೆಲ್ಲ ಪತ್ರ ಬರೆದಿದ್ದರೋ ಅವರಿಗೆಲ್ಲ ಜೂ.8 ರಂದೇ ಉತ್ತರ ನೀಡಲಾಗಿದೆ. ಮತ್ತೊಮ್ಮೆ ಉತ್ತರ ನೀಡುವ ಅಗತ್ಯವಿಲ್ಲ. ಕೆಲವು ತಪ್ಪುಗಳನ್ನು ಸರಿಪಡಿಸುವುದಾಗಿ ಹೇಳಿದ್ದೆವು. ಅದನ್ನು ಮಾಡಿದ್ದೇವೆ. ‘ಸಂವಿಧಾನ ಶಿಲ್ಪಿ’ ಪದ ಬಿಟ್ಟು ಹೋಗಿದ್ದನ್ನು ಸೇರಿಸಿದ್ದೇವೆ. ಅಂಬೇಡ್ಕರ್‌ ಚಿಂತನೆಯ ವಿಚಾರಗಳನ್ನು ಸೇರಿಸಿದ್ದೇವೆ. ಬದಲಾವಣೆಗೆ ಮುಕ್ತ ಮನಸ್ಸು ಹೊಂದಿರುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದೇವೆ’ ಎಂದೂ ಹೇಳಿದರು.

‘ಪತ್ರಿಕೆಗಳಲ್ಲಿ ಬಂದ ವಿಚಾರ, ಸಾಹಿತಿಗಳು ಎತ್ತಿರುವ ಆಕ್ಷೇಪಗಳಿಗೆ ಉತ್ತರ ನೀಡಿದ್ದೇವೆ. ಪದೇ ಪದೇ ಉತ್ತರ ನೀಡುವ ಅಗತ್ಯವೂ ಇಲ್ಲ. ಆಕ್ಷೇಪ ಎತ್ತಿದ 15 ಸಾಹಿತಿಗಳ
ಪೈಕಿ 9 ಸಾಹಿತಿಗಳ ಪಾಠವೇ ಇರಲಿಲ್ಲ’ ಎಂದೂ ನಾಗೇಶ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.