ADVERTISEMENT

ರೈತರ ಮೇಲಿನ ದಾಳಿಗೆ ಕೇಂದ್ರದ ಕುಮ್ಮಕ್ಕು: ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:26 IST
Last Updated 6 ಅಕ್ಟೋಬರ್ 2021, 16:26 IST
ಡಿ.ಕೆ. ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ
ಡಿ.ಕೆ. ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಕೃಷಿ ಸಂಬಂಧಿ ಮೂರು ಕಾಯ್ದೆಗಳ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದಾಳಿ ನಡೆಸುವಂತೆ ಉತ್ತರ ಪ್ರದೇಶ ಮತ್ತು ಹರ್ಯಾಣ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವೇ ಕುಮ್ಮಕ್ಕು ನೀಡಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು ಹತ್ತು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕಿತ್ತು. ಆದರೆ, ಕೇಂದ್ರ ಸರ್ಕಾರವೇ ಕುಮ್ಮಕ್ಕು ನೀಡಿ ದಾಳಿ ಮಾಡಿಸುತ್ತಿದೆ’ ಎಂದರು.

‘ಹೋರಾಟ ನಿಲ್ಲಿಸದಿದ್ದರೆ ರೈತರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಹೇಳಿದ್ದರು. ಅದರಂತೆಯೇ ಈಗ ಉತ್ತರ ಪ್ರದೇಶದಲ್ಲಿ ವಾಹನ ಹರಿಸಿ ರೈತರ ಹತ್ಯೆ ಮಾಡಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಮತ್ತು ಅವರ ಮಗ ಈ ಹತ್ಯೆಗೆ ಕಾರಣ. ಅಜಯ್‌ ಮಿಶ್ರಾ ಅವರನ್ನು ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟವರನ್ನು ಬಂಧಿಸಲಾಗುತ್ತಿದೆ. ಆದರೆ, ರೈತರ ಮೇಲೆ ಹರಿದ ಕಾರಿನಲ್ಲಿ ಅಜಯ್‌ ಮಿಶ್ರಾ ಮಗ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಆತನನ್ನು ಈವರೆಗೂ ಏಕೆ ಬಂಧಿಸಿಲ್ಲ? ಕೇಂದ್ರ ಸಚಿವರ ಮಗನ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ ಎಂದು ಖರ್ಗೆ ದೂರಿದರು.

ಅಜಯ್‌ ಮಿಶ್ರಾ ರೈತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸುಳ್ಳು ಹೇಳುವುದು ಮತ್ತು ಸಾಕ್ಷ್ಯಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೇಂದ್ರ ಸಂಪುಟದಿಂದ ತಕ್ಷಣ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಿಯಾಂಕಾ ಬಂಧನಕ್ಕೆ ಖಂಡನೆ: ಮೃತ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಕಾನೂನುಬಾಹಿರ. ಹತ್ಯೆಗೀಡಾದ ರೈತರ ಕುಟುಂಬದವರಿಗೆ ಸಾಂತ್ವನ ಹೇಳುವುದು ಅಪರಾಧವೆ? ವಾರೆಂಟ್‌ ಇಲ್ಲದೆ, ಯಾವುದೇ ಕಾರಣ ನೀಡದೆ ಬಂಧಿಸಿರುವುದು ಖಂಡನೀಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲಖನೌನಲ್ಲೇ ಇದ್ದರು. ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವನ್ನು ಅವರು ಮಾಡಲಿಲ್ಲ. ಪ್ರಿಯಾಂಕಾ ಗಾಂಧಿ ಬಂಧನದ ಕುರಿತೂ ಮೌನ ಮುರಿದಿಲ್ಲ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಧ್ರುವ ನಾರಾಯಣ್, ಶಾಸಕ ಪ್ರಿಯಾಂಕ್‌ ಖರ್ಗೆ, ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌, ಮಾಜಿ ಶಾಸಕ ಶರಣಬಸಪ್ಪ ದರ್ಶನಾಪುರ, ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.