ADVERTISEMENT

₹40 ಸಾವಿರ ಲಂಚ: ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಕಚೇರಿ ಅಧೀಕ್ಷಕಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 13:40 IST
Last Updated 3 ಏಪ್ರಿಲ್ 2024, 13:40 IST
ಲಂಚ ಆರೋಪ: ಕಂದಾಯ ನಿರೀಕ್ಷಕ ಸೇರಿ ಇಬ್ಬರ ಬಂಧನ
ಲಂಚ ಆರೋಪ: ಕಂದಾಯ ನಿರೀಕ್ಷಕ ಸೇರಿ ಇಬ್ಬರ ಬಂಧನ   

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ ವ್ಯವಸ್ಥಾಪಕರ ನೇಮಕಾತಿ ಪ್ರಕ್ರಿಯೆಗೆ ಸಹಕಾರ ಇಲಾಖೆಯ ಪ್ರತಿನಿಧಿಯನ್ನು ನಿಯೋಜಿಸಲು ₹ 40,000 ಲಂಚ ಪಡೆದ ಸಹಕಾರ ಸಂಘಗಳ ರಿಜಿಸ್ಸ್ರಾರ್‌ ಕಚೇರಿಯ ನಗರ ಸಹಕಾರ ಬ್ಯಾಂಕ್‌ಗಳ ವಿಭಾಗದ ಅಧೀಕ್ಷಕಿ ಶುಭಾ ಆರ್‌. ವಾಡ್ಕರ್‌ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ವ್ಯವಸ್ಥಾಪಕರ ನೇಮಕಾತಿ ಪ್ರಕ್ರಿಯೆ ನಡೆಸಲು ಇಲಾಖೆಯ ಪ್ರತಿನಿಧಿಯೊಬ್ಬರನ್ನು ನಿಯೋಜಿಸುವಂತೆ ಸಹಕಾರ ಸಂಘದ ಆಡಳಿತ ಮಂಡಳಿಯು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಕಚೇರಿಗೆ ಪ್ರಸ್ತಾವ ಸಲ್ಲಿಸಿತ್ತು. ಕಡತವು ನಗರ ಸಹಕಾರ ಬ್ಯಾಂಕ್‌ಗಳ ವಿಭಾಗದಲ್ಲಿತ್ತು. ಪ್ರತಿನಿಧಿ ನೇಮಕಕ್ಕೆ ₹ 40,000 ಲಂಚ ನೀಡುವಂತೆ ಅಧೀಕ್ಷಕಿ ಶುಭಾ ಬೇಡಿಕೆ ಇಟ್ಟಿದ್ದರು.

ಲಂಚದ ಬೇಡಿಕೆ ಕುರಿತು ಸಹಕಾರ ಸಂಘದ ಆಡಳಿತ ಮಂಡಳಿ ಪ್ರತಿನಿಧಿಗಳು ಲೋಕಾಯುಕ್ತದ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕ–1ಕ್ಕೆ ದೂರು ನೀಡಿದ್ದರು.

ADVERTISEMENT

ಆರೋಪಿಯ ಸೂಚನೆಯಂತೆ ಸಹಕಾರ ಸಂಘದ ಪ್ರತಿನಿಧಿಗಳು ಬುಧವಾರ ಭೇಟಿಮಾಡಿ ಲಂಚದ ಹಣ ತಲುಪಿಸಿದರು. ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ಎಸ್‌. ಮತ್ತು ತಂಡ ತಕ್ಷಣ ದಾಳಿಮಾಡಿ ಶುಭಾ ವಾಡ್ಕರ್‌ ಅವರನ್ನು ಬಂಧಿಸಿತು.

ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ–1 ಘಟಕದ ಎಸ್‌ಪಿ ಶ್ರೀನಾಥ್‌ ಜೋಶಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.