ADVERTISEMENT

ಕೋಕಾ–ಕೋಲಾ ಹೂಡಿಕೆ ಸೆಳೆಯಲು ಯತ್ನ: ಎಂ.ಬಿ. ಪಾಟೀಲ

ದಾವೋಸ್‌ನ ವಿಶ್ವ ಆರ್ಥಿಕ ಸಮಾವೇಶದಲ್ಲಿ ಕರ್ನಾಟಕದ ನಿಯೋಗ ಚರ್ಚೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 15:48 IST
Last Updated 20 ಜನವರಿ 2026, 15:48 IST
<div class="paragraphs"><p>ಸಚಿವ ಎಂ.ಬಿ. ಪಾಟೀಲ ನೇತೃತ್ವದ ಕರ್ನಾಟಕದ ನಿಯೋಗವು ಆಕ್ಟೋಪಸ್ ಎನರ್ಜಿ ಸಹ ಸಂಸ್ಥಾಪಕ ಸ್ಟುವರ್ಟ್ ಜಾಕ್ಸನ್ ಅವರನ್ನು ದಾವೋಸ್‌ನಲ್ಲಿ ಭೇಟಿ ಮಾಡಿತು.</p></div>

ಸಚಿವ ಎಂ.ಬಿ. ಪಾಟೀಲ ನೇತೃತ್ವದ ಕರ್ನಾಟಕದ ನಿಯೋಗವು ಆಕ್ಟೋಪಸ್ ಎನರ್ಜಿ ಸಹ ಸಂಸ್ಥಾಪಕ ಸ್ಟುವರ್ಟ್ ಜಾಕ್ಸನ್ ಅವರನ್ನು ದಾವೋಸ್‌ನಲ್ಲಿ ಭೇಟಿ ಮಾಡಿತು.

   

ಬೆಂಗಳೂರು: ‘ಕೋಕಾ–ಕೋಲಾ ಕಂಪನಿಯು ಭಾರತದಲ್ಲಿ ಹೂಡಿಕೆ ಮಾಡಲಿರುವ ₹25,760 ಕೋಟಿಯಲ್ಲಿ ಹೆಚ್ಚಿನ ಮೊತ್ತವನ್ನು ಕರ್ನಾಟಕಕ್ಕೆ ತರಲು ‍ಪ್ರಯತ್ನ ನಡೆಸಲಾಗಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಅಧಿಕಾರಿಗಳ ನಿಯೋಗದ ಜತೆ ಅವರು ಪಾಲ್ಗೊಂಡಿದ್ದಾರೆ.

ADVERTISEMENT

‘ಈ ವೇಳೆ,  ಕೋಕಾ–ಕೋಲಾ ಕಂಪನಿಯ ಜಾಗತಿಕ ನೀತಿ ಹಾಗೂ ಸುಸ್ಥಿರತೆಯ ಹಿರಿಯ ಉಪಾಧ್ಯಕ್ಷ ಮೈಕಲ್‌ ಗೋಲ್ಟ್ಜಮನ್‌ ಅವರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಪಾನೀಯ ತಯಾರಿಕೆ ಮತ್ತು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ವಿಜಯಪುರ ಜಿಲ್ಲೆಯು ಸೂಕ್ತ ಸ್ಥಳವಾಗಿರುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಕಂಪನಿಯು ಬಂಡವಾಳ ಹೂಡುವುದಾದರೆ ಎಲ್ಲ ಸೌಲಭ್ಯ ಹಾಗೂ ಬೆಂಬಲ ನೀಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಭರವಸೆ ನೀಡಿದ್ದೇನೆ’ ಎಂದು ಪಾಟೀಲ ಹೇಳಿದ್ದಾರೆ.

ದೇಶ- ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳ ದಿಗ್ಗಜರನ್ನು ಭೇಟಿಯಾದ ನಿಯೋಗವು ರಾಜ್ಯದಲ್ಲಿ ಉದ್ಯಮ ಸ್ಥಾಪನೆ, ವಿಸ್ತರಣೆ ಹಾಗೂ ಬಂಡವಾಳ ಹೂಡಿಕೆ ಆಕರ್ಷಿಸಲು ರಾಜ್ಯ ಸರ್ಕಾರ ನೀಡಲಿರುವ ಸಹಾಯಧನ, ಉತ್ತೇಜನಾ ಕ್ರಮಗಳನ್ನು ವಿವರಿಸಿತು. 

‘ಮೆಂಜಿಸ್‌ ಏವಿಯೇಷನ್ನಿನ ಕಾರ್ಯನಿರ್ವಾಹಕ ಅಧ್ಯಕ್ಷ ಹ್ಯಾಸನ್ ಎಲ್. ಹೌರಿ, ಯುಪಿಎಲ್‌ನ ಅಧ್ಯಕ್ಷ ಜೈ ಶ್ರಾಫ್, ಎಬಿ ಇನ್‌ಬೆವ್‌ನ ಕಾರ್ಪೊರೇಟ್‌ ವ್ಯವಹಾರಗಳ ಅಧಿಕಾರಿ ಜಾನ್‌ ಬ್ಲಡ್‌, ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌, ನ್ಯಾಚುರಲ್ ಫೈಬರ್ ವೆಲ್ಡಿಂಗ್‌ನ ಸುಹಾಸ್‌ ಉಪ್ಪಲಪತಿ ಅವರ ಜೊತೆ ಫಲಪ್ರದ ಮಾತುಕತೆ ನಡೆಯಿತು’ ಎಂದು ಅವರು ಹೇಳಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರೌಂಡ್‌ ಹ್ಯಾಂಡ್ಲಿಂಗ್‌ ಉದ್ದೇಶದ ಟೆಂಡರ್‌ ದೊರೆತರೆ ₹85 ಕೋಟಿ ಹೂಡಿಕೆ ಮಾಡಲಿರುವುದನ್ನು ಮೆಂಜಿಸ್‌ ಏವಿಯೇಷನ್‌, ರಾಜ್ಯದ ನಿಯೋಗದ ಗಮನಕ್ಕೆ ತಂದಿದೆ. ರಫ್ತು ಮಾರುಕಟ್ಟೆಗಳಿಗೆ ಪೂರಕವಾಗಿ, ಮೌಲ್ಯವರ್ಧಿತ ಮೆಕ್ಕೆಜೋಳ ಆಧಾರಿತ ಉತ್ಪನ್ನಗಳನ್ನು ತಯಾರಿಸಲು ಕೃಷಿ ಪರಿಹಾರ ಮತ್ತು ನೀರಾವರಿ ತಂತ್ರಜ್ಞಾನ ಕಂಪನಿಯಾದ ಯುಪಿಎಲ್‌ ಲಿಮಿಟೆಡ್‌ ಆಸಕ್ತಿ ವ್ಯಕ್ತಪಡಿಸಿದೆ ಎಂದು ಅವರು ವಿವರಿಸಿದ್ದಾರೆ.

ವಿದ್ಯುತ್ ಕ್ಷೇತ್ರದಲ್ಲೂ ಹೂಡಿಕೆಗೆ ಆಸಕ್ತಿ

‘ರೆನ್ಯೂ ಪವರ್ ಝೈಲಂ ಇಂಕ್ ಮತ್ತು ಆಕ್ಟೋಪಸ್ ಎನರ್ಜಿ ಕಂಪನಿಗಳ ಜತೆ ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಸಲಾಗಿದೆ’ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ. ‘ಆಕ್ಟೋಪಸ್ ಎನರ್ಜಿ ಕಂಪನಿ ವಿದ್ಯುತ್ ಕ್ಷೇತ್ರದಲ್ಲಿ ಸ್ಮಾರ್ಟ್ ಮೀಟರ್ ಡಿಜಿಟಲ್ ಸೌಕರ್ಯ ವೈಜ್ಞಾನಿಕ ಬೆಲೆ ನಿಗದಿ ಮತ್ತು ಗ್ರಿಡ್ ಸುಧಾರಣೆಗೆ ಹೆಸರುವಾಸಿಯಾಗಿದೆ. ಕಂಪನಿಯ ನಿಯೋಗದೊಂದಿಗೆ ವಿ2ಜಿ (ವೆಹಿಕಲ್ ಟು ಗ್ರಿಡ್) ತಂತ್ರಜ್ಞಾನ ಕುರಿತು ವಿಚಾರ ವಿನಿಮಯ ನಡೆಸಲಾಗಿದೆ’ ಎಂದಿದ್ದಾರೆ. ‘ಸೌರ ಪವನ ಮತ್ತು ಹೈಬ್ರಿಡ್ ವಿದ್ಯುತ್ ಯೋಜನೆಗಳಿಗೆ ಹೆಸರಾಗಿರುವ ರೆನ್ಯೂ ಕಂಪನಿಯು ತನ್ನ ಉದ್ದೇಶಿತ ಯೋಜನೆಗಳ ಬಗ್ಗೆ ನಮ್ಮ ಗಮನ ಸೆಳೆದಿದೆ. ನ್ಯೂಯಾರ್ಕ್‌ನ ಝೈಲಂ ಇಂಕ್ ಕಂಪನಿಯು ರಾಜ್ಯದಒಂದು ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಘಟಕ ಸ್ಥಾಪಿಸಿ ವಿಸ್ತೃತ ಅಧ್ಯಯನ ಕೈಗೊಳ್ಳಲು ಬಯಸಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.