ADVERTISEMENT

ತಾಲ್ಲೂಕು ಕೇಂದ್ರಗಳಲ್ಲಿ ಶೀತಲೀಕರಣ ಘಟಕ: ಸಚಿವ ಬಿ.ಸಿ.ಪಾಟೀಲ್ 

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 7:52 IST
Last Updated 22 ಏಪ್ರಿಲ್ 2020, 7:52 IST
ಶೀತಲೀಕರಣ ಘಟಕವೊಂದರ ಹೊರ ನೋಟ– ಸಂಗ್ರಹ ಚಿತ್ರ
ಶೀತಲೀಕರಣ ಘಟಕವೊಂದರ ಹೊರ ನೋಟ– ಸಂಗ್ರಹ ಚಿತ್ರ   

ತುಮಕೂರು: ಈಗಾಗಲೇ 20 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆಯೂ ರೈತರು ತಮ್ಮ ಉತ್ಪನ್ನಗಳನ್ನು ಶೇಖರಿಸಲು ಶೀತಲೀಕರಣ ಘಟಕಗಳು ಅವಶ್ಯ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ತಾಲ್ಲೂಕು ಕೇಂದ್ರಗಳಲ್ಲೂ ಶೀತಲೀಕರಣ ಘಟಕ ಸ್ಥಾಪನೆಗೆ ಅಗತ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು‌.

ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪನ್ನ ದಾಸ್ತಾನಿಗೆ ಶೀತಲೀಕರಣ ಘಟಕ ಅವಶ್ಯವಾಗಿದೆ. ಈ ವಿಚಾರವಾಗಿ ಆದ್ಯತೆಯೊಂದಿಗೆ ಕೆಲಸ ಮಾಡಲಾಗುವುದು ಎಂದರು.

ಕಳಪೆ ಹಾಗೂ ಅವಧಿಪೂರ್ಣಗೊಂಡ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಇಂತಹ ಬೆಳವಣಿಗೆಗಳ ಮೇಲೆ ನಿಗಾ ಇಡಲು ರಾಜ್ಯಮಟ್ಟದಲ್ಲಿ ಮೂರು ತಂಡ ರಚಿಸಲಾಗಿದೆ. ಇಲಾಖೆ ಜಿಲ್ಲಾ ಉಪನಿರ್ದೇಶಕರು ಹಾಗೂ ಅಧಿಕಾರಿಗಳನ್ನು ಒಳಗೊಂಡ ವಿಚಕ್ಷಣಾದಳ ರಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಕಳಪೆ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದ ರಾಣೆಬೆನ್ನೂರಿನ ವೆಂಕಟೇಶ್ವರ ಆಗ್ರೊ ಕೇಂದ್ರಕ್ಕೆ ಬೀಗ ಮುದ್ರೆ ಹಾಕಲಾಗಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೂವಿನಹಡಗಲಿ ತಾಲ್ಲೂಕಿನ ಲಿಂಗನಹಳ್ಳಿಯ 5.8 ಲಕ್ಷ ದ ಕಳಪೆ ಮುಸುಕಿನ ಜೋಳ ಮಾರಾಟ ಮಾಡುತ್ತಿದ್ದ ಕೇಂದ್ರ, ರಟ್ಟಿಹಳ್ಳಿ ತಾಲ್ಲೂಕು ಕೇಂದ್ರದ ಸೃಷ್ಟಿ ಆಗ್ರೊ ಕೇಂದ್ರ, ಮಾಸೂರಿನ ಕೃಷಿ ಆಗ್ರೊ ಕೇಂದ್ರ ಹೀಗೆ ಹಲವು ರಸಗೊಬ್ಬರ ಬಿತ್ತನೆ ಬೀಜ ಮಾರಾಟ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗುಡಿಬಂಡೆ, ಬಾಗೇಪಲ್ಲಿ ಚಿಂತಾಮಣಿಯಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ ಎಂದು ವಿವರಿಸಿದರು.

ಇಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು‌. ಕ್ರಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು‌.

ಪೂರ್ವ ಮುಂಗಾರು ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು‌. ಈ ಹಿನ್ನೆಲೆಯಲ್ಲಿ ಅಗತ್ಯ ಗೊಬ್ಬರ ಮತ್ತು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿಯೂ ಕೊರತೆ ಇಲ್ಲ. ಕೇಂದ್ರ ಸರ್ಕಾರವು ಕೃಷಿ ಇಲಾಖೆಗೆ ನೀಡುವ ಅನುದಾನ ಕಡಿತಗೊಳಿಸಿಲ್ಲ ಎಂದು ಹೇಳಿದರು.

ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಈ ದಾಸ್ತಾನು ಪರಿಶೀಲಿಸಿದ್ದೇನೆ ಎಂದರು.

2016ನೇ ಸಾಲಿನ ಫಸಲ್ ಬಿಮಾ ಯೋಜನೆಯ 18.59 ಲಕ್ಷ ರೈತರ 1.13 ಕೋಟಿ ಷೇರು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಸರ್ಕಾರವು ರೈತರಿಗೆ ವಿವಿಧ ಯೋಜನೆಯಡಿ ನೀಡುವ ಸಹಾಯಧನ, ವಿಮೆ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು‌. ಕೆಲವು ಬ್ಯಾಂಕುಗಳ ಈ ರೀತಿ ಮಾಡಿದ್ದವು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬ್ಯಾಂಕ್‌ಗಳ ಪಟ್ಟಿಯೊಂದಿಗೆ ಮಾಹಿತಿ ನೀಡಿದ್ದೆ. ಅವರು ಅಂತಹ ಬ್ಯಾಂಕುಗಳಿಗೆ ಈ ಸಂಬಂಧ ನೋಟಿಸ್ ಸಹ ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.