ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಶೀತಗಾಳಿಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತವಾಗುತ್ತಿದೆ. ಇದರಿಂದಾಗಿ ಚಳಿ ಹೆಚ್ಚಳವಾಗುತ್ತಿದೆ.
ಹವಾಮಾನ ಇಲಾಖೆ ಪ್ರಕಾರ, ವಾರದಿಂದ ಕನಿಷ್ಠ ತಾಪಮಾನ ಇಳಿಮುಖವಾಗಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ 20 ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಒಳಗೆ ವರದಿಯಾಗಿದೆ. ವಿಜಯಪುರದಲ್ಲಿ ಅತೀ ಕಡಿಮೆ ಉಷ್ಣಾಂಶ (10.9 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಶೀತಗಾಳಿಯಿಂದಾಗಿ ದಿನದ ಬಹುತೇಕ ಅವಧಿ ಚಳಿ ಕಾಣಿಸಿಕೊಳ್ಳುತ್ತಿದೆ.
2024ರ ಡಿಸೆಂಬರ್ ಅಂತ್ಯಕ್ಕೆ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕವಿತ್ತು. ಕೆಲ ದಿನಗಳಿಂದ ಕರಾವಳಿಯ ಹಲವು ಸ್ಥಳಗಳು ಹಾಗೂ ಒಳನಾಡಿನ ಕೆಲವು ಸ್ಥಳಗಳಲ್ಲಿ ನಾಲ್ಕು ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಕೆಯಾಗಿದೆ.
ಮುಂದಿನ ಎರಡು ದಿನಗಳು ಉತ್ತರ ಕನ್ನಡ, ಬೀದರ್, ವಿಜಯಪುರ, ಧಾರವಾಡ, ಹಾವೇರಿ, ರಾಯಚೂರು, ಚಿಕ್ಕಮಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಕನಿಷ್ಠ ತಾಪಮಾನವು 2ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಿಲ್ಲ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.