ADVERTISEMENT

ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 18:03 IST
Last Updated 1 ಜುಲೈ 2021, 18:03 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ   

ಬೆಂಗಳೂರು: ‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿಗೆ ಇದೇ 7ರೊಳಗೆ ಕೋವಿಡ್‌ ಲಸಿಕೆ ಹಾಕಿಸಲು ಆದ್ಯತೆ‌ ನೀಡಬೇಕು’ ಎಂದು ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸೂಚಿಸಿದರು.

ಲಸಿಕೆ ಅಭಿಯಾನವನ್ನು‌ ತ್ವರಿತಗೊಳಿಸುವ ಸಂಬಂಧ ಕುಲಪತಿಗಳ ಜತೆ ಗುರುವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ‘ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಲಸಿಕೀಕರಣ ಮುಗಿದ ಬಳಿಕ ಭೌತಿಕವಾಗಿ ತರಗತಿಗಳನ್ನು ಆರಂಭಿಸುವ ಕುರಿತು ನಿರ್ಧರಿಸಲಾಗುವುದು. ಈಗ ನಡೆಯುತ್ತಿರುವ ಆನ್‌ಲೈನ್‌ ತರಗತಿಗಳು ಅಬಾಧಿತ’ ಎಂದರು.

‘ತರಗತಿಗಳು ನೇರವಾಗಿ ಆರಂಭಿಸುವುದಕ್ಕೂ ಮೊದಲು ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಬೇಕು. ನಿತ್ಯ ಪೂರೈಕೆಯಾಗುವ ಲಸಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಬೇಕು. ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಈ ವಿಷಯವನ್ನು ಎಲ್ಲ ಕುಲಪತಿಗಳು ಗಂಭೀರವಾಗಿ ಪರಿಗಣಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಪದವಿ ವಿದ್ಯಾರ್ಥಿಗಳಿಗೆ ಸಹಾಯವಾಣಿ: ‘ವಿದ್ಯಾರ್ಥಿಗಳಿಗೆ ಡಿಜಿಟಲ್‌ ವೇದಿಕೆಗಳ ಮೂಲಕ ಈಗಾಗಲೇ ಎಲ್ಲ ಮಾಹಿತಿ ಸಿಗುತ್ತಿದ್ದರೂ, ಮತ್ತಷ್ಟು ಅನುಕೂಲ ಮಾಡಿಕೊಡಲು ಆಯಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಸಹಾಯವಾಣಿ ರೂಪಿಸಿಕೊಳ್ಳಬೇಕು. ಅದಕ್ಕೆ ಅಗತ್ಯ ನೆರವು ಸರ್ಕಾರ ನೀಡಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವುದರಿಂದ ಈ ವ್ಯವಸ್ಥೆ ಅತ್ಯುತ್ತಮ ಉಪಕ್ರಮ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.