ADVERTISEMENT

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ: ಧಾರ್ಮಿಕ ಭಾವನೆಗಳಿಗೆ ಅಪಚಾರ; ಹೈಕೋರ್ಟ್‌ ಕಿಡಿ

ತೋಚಿದಂತೆಲ್ಲಾ ನಡೆದುಕೊಳ್ಳಬಹುದೇ: ಹೈಕೋರ್ಟ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 14:53 IST
Last Updated 21 ಜನವರಿ 2026, 14:53 IST
<div class="paragraphs"><p>ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ</p></div>

ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ

   

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಟಿ.ವಿ ಶೋನಲ್ಲಿ ಮಹಾಭಾರತದ ಪಾತ್ರಗಳು ಹಾಗೂ ಹಿಂದೂ ದೇವತೆಗಳನ್ನು ವಿಡಂಬನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ‘ವಾಕ್‌ ಸ್ವಾತಂತ್ರ್ಯದ ನೆಪದಲ್ಲಿ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳಬಹುದೇ’ ಎಂದು ಝೀ ಟಿವಿ ತಂಡವನ್ನು ಕಟುವಾಗಿ ಪ್ರಶ್ನಿಸಿದೆ.

‘ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಚಿತ್ರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸಬೇಕು’ ಎಂದು ಕೋರಿ ಜೀ ಎಂಟರ್‌ ಪ್ರೈಸಸ್‌ನ ಅಧಿಕೃತ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ‘ಕಾಮಿಡಿ ಕಿಲಾಡಿಗಳು’ ನಿರ್ದೇಶಕ ಕೆ.ಅನಿಲ್‌ ಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ADVERTISEMENT

ಈ ಕುರಿತಾದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ವಾಕ್‌ ಸ್ವಾತಂತ್ರ್ಯದ ನೆಪದಲ್ಲಿ ನಿಮಗೆ ಅನಿಸಿದ್ದೆಲ್ಲವನ್ನೂ ಮಾಡಬಹುದೇ? ದೇವರು, ಪೌರಾಣಿಕ ವ್ಯಕ್ತಿಗಳನ್ನು ನಿಷ್ಪ್ರಯೋಜಕರು ಎನ್ನುವ ರೀತಿಯಲ್ಲಿ ಬಿಂಬಿಸುವವರಿಗೆ ಅನುಗ್ರಹ ತೋರುವ ಅಗತ್ಯವಿಲ್ಲ’ ಎಂದು ಅರ್ಜಿದಾರರಿಗೆ ಚಾಟಿ ಬೀಸಿತು.

‘ಇಂತಹ ಮನೋಭಾವದ ಆರೋಪಿಗಳನ್ನು ಏಕೆ ಸುಮ್ಮನೆ ಬಿಡಬೇಕು’ ಎಂದು ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಚೌಟ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ‘ದೂರನ್ನು ಗಮನಿಸಿದ್ದೀರಾ? ದೇವರೆಂದು ಆರಾಧಿಸುವ ಕೃಷ್ಣ ಮತ್ತು ದ್ರೌಪದಿಯನ್ನು ನಿಮ್ಮ ಕಾರ್ಯಕ್ರಮದಲ್ಲಿ ಹೇಗೆಲ್ಲಾ ಬಿಂಬಿಸಲಾಗಿದೆ? ದೂರನ್ನು ಓದುವ ರೀತಿಯಲ್ಲಿ ಇದೆಯೇ? ಎಂದು ಖಾರವಾಗಿ ಪ್ರಶ್ನಿಸಿತು.

‘ಕಾಮಿಡಿ ಎನ್ನುವುದು ಮ‌ತ್ತೊಬ್ಬರಿಗೆ ಹೊರೆಯಾಗಬಾರದು ಮತ್ತು ವಿಪರೀತಕ್ಕೂ ಹೋಗಬಾರದು. ನ್ಯಾಯಾಲಯಗಳ ವಿಪುಲ ಹೆಚ್ಚು ಔದಾರ್ಯದಿಂದಾಗಿಯೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಎಲ್ಲವನ್ನೂ ಒಂದೇ ರೀತಿಯಲ್ಲಿ ಕಾಣಲಾಗದು ಎಂಬುದು ನೆನಪಿರಲಿ. ಒಂದು ವೇಳೆ ಕೋರ್ಟ್‌ ಬಿರುಸುತನ ಪ್ರದರ್ಶಿಸಿದ್ದೇ ಆದರೆ ಅದು ಬೇರೆಯದೇ ಆಗಿರುತ್ತದೆ’ ಎಂದು ಎಚ್ಚರಿಸಿತು.

ಇದೇ ವೇಳೆ ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ಅವರಿಗೆ, ‘ಪ್ರಾಸಿಕ್ಯೂಷನ್‌ ಸರಿಯಾದ ರೀತಿಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೇ ಇರುವ ಕಾರಣಕ್ಕಾಗಿಯೇ ಇಂತಹ ಪ್ರಕರಣಗಳು ವೃಥಾ ಬರ್ಖಾಸ್ತುಗೊಳ್ಳುತ್ತವೆ. ಪ್ರತಿ ಪ್ರಕರಣದಲ್ಲೂ ಈ ಸಮಸ್ಯೆ ಎದ್ದು ಕಾಣುತ್ತದೆ. ಇದು ಉದ್ದೇಶಪೂರ್ವಕ ಇರಬಹುದೇ’ ಎಂಬ ಶಂಕೆ ವ್ಯಕ್ತಪಡಿಸಿತು. 

‘ಅರ್ಜಿದಾರರು ತನಿಖೆಯಲ್ಲಿ ಭಾಗಿಯಾಗಬೇಕು. ಮುಂದಿನ ವಿಚಾರಣೆಯ ದಿನದವರೆಗೆ ಪ್ರಾಸಿಕ್ಯೂಷನ್‌ ಅರ್ಜಿದಾರರ ವಿರುದ್ಧ ಆತುರದ ಕ್ರಮ ಕೈಗೊಳ್ಳಬಾರದು’ ಎಂದು ಆದೇಶಿಸಿತು. ಅಂತೆಯೇ, ದೂರುದಾರ ಪ್ರಶಾಂತ ಶಶಿಧರ ನರಗುಂದ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. 

ಕೃಷ್ಣನ ಪಾತ್ರಧಾರಿಗೆ ಕಪಾಳಮೋಕ್ಷ..!

‘ಮಹಾಭಾರತದಲ್ಲಿನ ಪಾತ್ರಗಳನ್ನು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತೆ ಬಿಂಬಿಸಲಾಗಿದೆ. ಶ್ರೀಕೃಷ್ಣ, ಪಾಂಡವರು, ಧೃತರಾಷ್ಟ್ರ ಪಾತ್ರಧಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಶ್ರೀಕೃಷ್ಣನ ಪಾತ್ರಧಾರಿಗೆ 2-3 ಬಾರಿ ಕಪಾಳ ಮೋಕ್ಷ, ದ್ರೌಪದಿ ಪಾತ್ರಧಾರಿಯ ಮೈ ಮೇಲೆ ಸರಾಯಿ ಸಿಂಪಡಣೆ ಮಾಡಲಾಗಿದೆ. ಇದರಿಂದ ಹಿಂದೂ ಧಾರ್ಮಿಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ’ ಎಂದು ಆರೋಪಿಸಿ ಹುಬ್ಬಳ್ಳಿಯ ಕೇಶ್ವಾಪುರದ ಪ್ರಶಾಂತ್‌ ಶಶಿಧರ ನರಗುಂದ 2025ರ ನವೆಂಬರ್‌ 15ರಂದು ದೂರು ನೀಡಿದ್ದರು.

ದೂರು ಆಧರಿಸಿ, ಕಾಮಿಡಿ ಕಿಲಾಡಿಗಳು ಕಲಾವಿದರು, ಸ್ಕ್ರಿಪ್ಟ್‌ ರೈಟರ್‌, ನಿರ್ದೇಶಕ, ಜೀ ಕನ್ನಡ ವಾಹಿನಿ, ಜೀ–5 ಒಟಿಟಿ, ಕಾಮಿಡಿ ಕಿಲಾಡಿಗಳು ಪ್ರಸಾರಕರು ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್‌) ಕಲಂ 299ರ ಅಡಿಯಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಈ ಪ್ರಕರಣವನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಈ ದೇಶದಲ್ಲಿ ಹಾಸ್ಯದ ಹೆಸರಿನಲ್ಲಿ ಏನು ಬೇಕಾದರೂ ನಡೆಯಬಹುದೇ? ವಾಕ್‌ ಸ್ವಾತಂತ್ರ್ಯವನ್ನು ಬೇಕಾಬಿಟ್ಟಿ ಬಳಸುವುದು ಎಷ್ಟು ಸರಿ? ಇಂತಹ ಪ್ರಕರಣಗಳಲ್ಲಿ ಕೋರ್ಟ್‌ ಅನುಕಂಪ ತೋರಬೇಕೇ?
ನ್ಯಾ.ಎಂ.ನಾಗಪ್ರಸನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.