ADVERTISEMENT

ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 19:15 IST
Last Updated 14 ಮಾರ್ಚ್ 2023, 19:15 IST
ರಾಣೆಬೆನ್ನೂರಿನ ಬೀರೇಶ್ವರ ನಗರದಲ್ಲಿರುವ  ಆರ್‌.ಶಂಕರ್ ಅವರ ಭವ್ಯ ಬಂಗಲೆ
ರಾಣೆಬೆನ್ನೂರಿನ ಬೀರೇಶ್ವರ ನಗರದಲ್ಲಿರುವ ಆರ್‌.ಶಂಕರ್ ಅವರ ಭವ್ಯ ಬಂಗಲೆ   

ರಾಣೆಬೆನ್ನೂರು: ಇಲ್ಲಿನ ಬೀರೇಶ್ವರ ನಗರದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು. ತಡರಾತ್ರಿವರೆಗೂ ಪರಿಶೀಲನೆ ಮುಂದುವರಿದಿತ್ತು.

ಶಂಕರ್‌ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಸಂಗ್ರಹಿಸಿಟ್ಟಿದ್ದ ಶಂಕರ್‌ ಭಾವಚಿತ್ರ ಇರುವ ಸೀರೆ ಬಾಕ್ಸ್,‌ ತಟ್ಟೆ– ಲೋಟ ಹಾಗೂ ಎಲ್‌ಕೆಜಿಯಿಂದ ಪದವಿ ಕಾಲೇಜುಗಳವರೆಗೆ ಹಂಚಲು ತಂದಿರುವ ಸ್ಕೂಲ್‌ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾವೇರಿ ಉಪವಿಭಾಗಾಧಿಕಾರಿ ಅವರಿಗೆ ದಾಖಲೆ ಪತ್ರ, ಬಿಲ್‌ ಮತ್ತು ಸ್ಟಾಕ್‌ ಚೆಕ್‌ ತಪಾಸಣೆ ನಡೆಸಲು ವಾಣಿಜ್ಯ ತೆರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಕುಮ್ಮಕ್ಕಿನಿಂದ ದಾಳಿ: ವಿಧಾನ ಪರಿತಷ್‌ ಸದಸ್ಯರ ಆರ್‌.ಶಂಕರ್‌ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅವರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ. ಅವರ ಕೆಲಸ ಅವರು ಮಾಡಲಿ. ಇನ್ನೂ ಚುನಾವಣೆ ನೀತಿಸಂಹಿತೆ ಜಾರಿ ಆಗಿಲ್ಲ. ಯಾರದೋ ಕುಮ್ಮಕ್ಕಿನಿಂದ ಈ ದಾಳಿ ನಡೆಸಿದ್ದಾರೆ. ನಾನು ದುಡಿದ ಹಣದಲ್ಲಿ ಕೆಲ ಭಾಗವನ್ನು ತಾಲ್ಲೂಕಿನ ಜನತೆ ಅಭಿವೃದ್ಧಿಗೆ ನೀಡುತ್ತೇನೆ ಎಂದು ಹಿಂದೆಯೇ ಮಾತು ಕೊಟ್ಟಿದ್ದೇನೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ’ ಎಂದರು.

ಆರ್‌.ಶಂಕರ್‌ ಅಭಿಮಾನಿ ಬಳಗ ಮತ್ತು ಶಂಕರ್‌ ಎಜುಕೇಷನ್‌ ಟ್ರಸ್ಟ್‌ನಿಂದ ಸ್ಕೂಲ್‌ ಮಕ್ಕಳಿಗೆ ಬ್ಯಾಗ್‌ ವಿತರಣೆ ಮಾಡುತ್ತಿದ್ದೇನೆ. ಎಲ್ಲವನ್ನು ಜಿಎಸ್‌ಟಿ ಬಿಲ್‌ ಪಾವತಿಸಿ ತಂದಿದ್ದೇನೆ. ಆಸ್ತಿ ಮಾರಿ ಜನತೆಗೆ ಸಹಾಯ ಮಾಡಲು ಮುಂದಾಗಿದ್ದೇನೆ. ಬಡವರಿಗೆ ಮತ್ತು ಸ್ಕೂಲ್‌ ಮಕ್ಕಳಿಗೆ ಹಂಚಲು ದಾನ ಧರ್ಮ ಮಾಡಲು ತಂದಿದ್ದೇನೆ ಎಂದರು.

ರಾಜಕೀಯ ಸನ್ಯಾಸ: ಸಿದ್ದರಾಮಯ್ಯ ಅವರು ಶಂಕರ್‌ ದುಡ್ಡು ಹೊಡೆದು ಬಿಜೆಪಿ ಸೇರಿದ್ದಾನೆ ಎಂದು ಹೇಳಿಕೆ ನೀಡಿದ್ದು, ಸಾಬೀತಾದರೆ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ. ಯಾವ ದುಡ್ಡೂ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಬಲಿಗರ ಆಕ್ರೋಶ: ಸುದ್ದಿ ತಿಳಿದು ತಡರಾತ್ರಿ ಆರ್‌.ಶಂಕರ್‌ ಅವರ ಮನೆ ಬಳಿ ನೆರೆದ ಬೆಂಬಲಿಗರು, ‘2012ರಿಂದ ಶಂಕರ್‌ ಅವರು ರಾಣೆಬೆನ್ನೂರಿನಲ್ಲಿ ಅನೇಕ ಸಾಮಗ್ರಿಗಳನ್ನು ಹಂಚಿದ್ದಾರೆ. ಬಿಜೆಪಿ ಸರ್ಕಾರ ಬರಲು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಶಂಕರ್‌ ಅವರ ತ್ಯಾಗವೇ ಕಾರಣ. ಅಂಥವರ ಮನೆ ಮೇಲೆ ದಾಳಿ ನಡೆಸುತ್ತಾರೆ ಎಂದರೆ ಮುಂಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಮೇಡ್ಲೇರಿಯ ಚಂದ್ರು ಪೂಜಾರ, ನಾಗರಾಜ ದೊಡ್ಡಮನಿ, ಸತ್ಯಪ್ಪ ದಿಳ್ಳೆಪ್ಪನವರ, ಕರಿಯಪ್ಪ ತೋಗಟಗೇರ ಸೇರಿದಂತೆ ಹಲವು ಬೆಂಬಲಿಗರು ಆಕ್ರೋಶ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.