ADVERTISEMENT

ಕಬ್ಬಿಣ ವ್ಯಾಪಾರ: ಮೂರು ಹಂತದಲ್ಲಿ ಜಿಎಸ್‌ಟಿ ಅಕ್ರಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 20:34 IST
Last Updated 28 ನವೆಂಬರ್ 2025, 20:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ಹಲವೆಡೆ ಕಾರ್ಯಾಚರಣೆ ನಡೆಸಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಿಮೆಂಟ್‌, ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಕಬ್ಬಿಣ ಮಾರಾಟದ ವೇಳೆ ಮೂರು ಹಂತದಲ್ಲಿ ಜಿಎಸ್‌ಟಿ ವಂಚನೆ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ.

‘ಎಸ್‌.ಪಿ ರಸ್ತೆ, ಬಂಬೂ ಬಜಾರ್‌, ಜೆ.ಸಿ.ರಸ್ತೆಗಳಲ್ಲಿ ಹಲವು ಕಬ್ಬಿಣದ ಅಂಗಡಿಗಳು ಇದ್ದು, ದೊಡ್ಡ ಮಟ್ಟದ ವ್ಯಾಪಾರ ನಡೆಯುತ್ತದೆ. ಆದರೆ ಇಲ್ಲಿ ಟಿಎಂಟಿ ಬಾರ್‌ಗಳು, ಕಬ್ಬಿಣದ ಕೊಳವೆಗಳು, ತಗಡು ಶೀಟ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಜಿಎಸ್‌ಟಿ ಬಿಲ್‌ ನೀಡುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

‘ಇಂತಹ ಸರಕುಗಳಿಗೆ ಶೇ 18ರಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ. ಶೇ 15 ರಿಂದ ಶೇ 16ರಷ್ಟು ಜಿಎಸ್‌ಟಿ ಪಡೆದು, ಬಿಳಿ ಹಾಳೆಯಲ್ಲಿ ಲೆಕ್ಕ ಬರೆದು ಗ್ರಾಹಕರಿಗೆ ನೀಡುತ್ತಾರೆ. ಬಳಸಿದ ಕಬ್ಬಿಣವನ್ನು ಇಲ್ಲಿನ ಗುಜರಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅವುಗಳಿಗೂ ಶೇ 5ರಷ್ಟು ಜಿಎಸ್‌ಟಿ ಪಾವತಿಸುತ್ತಿಲ್ಲ’ ಎಂದು ಮಾಹಿತಿ ನೀಡಿದರು.

‘ಜಿಎಸ್‌ಟಿ ಬಿಲ್‌ ನೀಡದೇ ಇರುವುದು ಒಂದು ಹಂತದ ವಂಚನೆಯಾದರೆ, ಈ ಎಲ್ಲ ಸರಕುಗಳಿಗೆ ವರ್ತಕರು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದುಕೊಂಡಿದ್ದಾರೆ. ಇದು ಎರಡನೇ ಹಂತದ ವಂಚನೆ. ಇದರ ಜತೆಯಲ್ಲಿಯೇ, ನಿಜವಾದ ಗ್ರಾಹಕರಿಗೆ ಮಾರಾಟ ಮಾಡಿದ ಸರಕುಗಳಿಗೆ ಕೆಲವೇ ಮಧ್ಯವರ್ತಿಗಳು ಮತ್ತು ಗುತ್ತಿಗೆದಾರರ ಹೆಸರಿನಲ್ಲಿ ಜಿಎಸ್‌ಟಿ ಬಿಲ್‌ ಸೃಜಿಸಿದ್ದಾರೆ. ಆ ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ಆ ಬಿಲ್‌ಗಳ ಆಧಾರದಲ್ಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದುಕೊಂಡಿದ್ದಾರೆ. ಇದು ಮೂರನೇ ಹಂತದ ವಂಚನೆ’ ಎಂದು ವಿವರಿಸಿದರು.

‘ಇಂತಹ ಪ್ರಕರಣಗಳಲ್ಲಿ ಹೆಚ್ಚಿನ ತನಿಖೆಗೆ ಕ್ರಮ ತೆಗೆದುಕೊಳ್ಳಾಗಿದೆ. ವರ್ತಕರು, ಮಧ್ಯವರ್ತಿಗಳು, ಗುತ್ತಿಗೆದಾರರ ಬ್ಯಾಂಕ್‌ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.