ADVERTISEMENT

ಗುತ್ತಿಗೆದಾರರ ಬೇಡಿಕೆ ಈಡೇರಿಸಲು ಬದ್ಧ: ಜಮೀರ್‌ ಅಹಮದ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:47 IST
Last Updated 8 ಮೇ 2025, 15:47 IST
<div class="paragraphs"><p>ಜಮೀರ್‌ ಅಹಮದ್‌ ಖಾನ್‌ ಅವರು ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದರು</p></div>

ಜಮೀರ್‌ ಅಹಮದ್‌ ಖಾನ್‌ ಅವರು ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದರು

   

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಎಲ್ಲ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿರುವ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಜ್ಯೇಷ್ಠತೆ ಆಧಾರದಲ್ಲೇ ಬಿಲ್‌ ಪಾವತಿಸುವುದಾಗಿ ಹೇಳಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್‌ ಹಾಗೂ ಪದಾಧಿಕಾರಿಗಳೊಂದಿಗೆ ಸಚಿವರು ಗುರುವಾರ ಸಭೆ ನಡೆಸಿದರು.

ADVERTISEMENT

‘ಗುತ್ತಿಗೆದಾರರ ಕುಂದುಕೊರತೆ ಮತ್ತು ಬಾಕಿ ಬಿಲ್ ಪಾವತಿ ವಿಳಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಹಲವು ಬಾರಿ ನಿಮ್ಮ ಗಮನಕ್ಕೆ ತಂದಿದ್ದೇವೆ. ಆದ್ದರಿಂದ ತಾವೂ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆಯಬೇಕು’ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಸಚಿವರಿಗೆ ಪತ್ರ ಬರೆದಿತ್ತು. ಅದಕ್ಕೆ ಸ್ಪಂದಿಸಿದ ಸಚಿವರು ಸಭೆ ನಡೆಸಿ, ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

‘ಬಾಕಿ ಬಿಲ್‌ ಪಾವತಿಯನ್ನು ಜ್ಯೇಷ್ಠತೆ ಆಧಾರದಲ್ಲಿ ಕೂಡಲೇ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಗುತ್ತಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗಿದ್ದರೆ ಅದನ್ನು ಪರಿಹರಿಸುವ ಭರವಸೆಯನ್ನೂ ನೀಡಿದ್ದಾರೆ. ಕಾಮಗಾರಿಗಳಲ್ಲಿ ರಾಜ್ಯದ ಗುತ್ತಿಗೆದಾರರಿಗೇ ಹೆಚ್ಚಿನ ಆದ್ಯತೆ ನೀಡುವುದಾಗಿಯೂ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ತಿಳಿಸಿದರು.

‘ಜಲ ಸಂಪನ್ಮೂಲ, ಪಂಚಾಯತ್ ರಾಜ್, ವಸತಿ, ಸಣ್ಣ ನೀರಾವರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ಪೌರಾಡಳಿತ ಇಲಾಖೆಯಲ್ಲಿ ಬಿಲ್‌ ಪಾವತಿ ವಿಳಂಬದ ಬಗ್ಗೆ ಆಯಾ ಸಚಿವರಿಗೆ ಪತ್ರ ಬರೆದು, ಸಮಸ್ಯೆ ಬಗೆಹರಿಸಲು ಮನವಿ ಮಾಡಿಕೊಳ್ಳಲಾಗಿತ್ತು. ಜಲಸಂಪನ್ಮೂಲ ಇಲಾಖೆಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಬಿಟ್ಟು ಉಳಿದ ಆರೂ ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.