ಬೆಂಗಳೂರು: ಸಂಸತ್ತು ಅಥವಾ ವಿಧಾನ ಮಂಡಲದ ಸದನಗಳು ಇರುವುದು ಜನರ ಸಮಸ್ಯೆ–ಆಗುಹೋಗುಗಳ ಚರ್ಚೆಗೆ. ಅದನ್ನು ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಬಳಸಿಕೊಳ್ಳಬಾರದು ಎಂಬ ಅಭಿಪ್ರಾಯಕ್ಕೆ ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದ ವೇದಿಕೆ ಸಾಕ್ಷಿಯಾಯಿತು.
ನಗರದಲ್ಲಿ ಇದೇ 12 ಮತ್ತು 13ರಂದು ನಡೆಯಲಿರುವ ಈ ಸಮ್ಮೇಳನದಲ್ಲಿ ಲೋಕಸಭೆಯ ಸ್ಪೀಕರ್ ಮತ್ತು ಉಪಸ್ಪೀಕರ್, ಎಲ್ಲ ರಾಜ್ಯಗಳ ವಿಧಾನಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪತಿ ಭಾಗಿಯಾಗಲಿದ್ದಾರೆ.
ದೇಶದ ಎಲ್ಲ ರಾಜ್ಯಗಳಿಂದ ಬಂದಿದ್ದ ಗಣ್ಯರನ್ನು ಬರಮಾಡಿಕೊಂಡ ನಂತರ ಸಾಕ್ಷ್ಯಚಿತ್ರವೊಂದರ ಮೂಲಕ ಅವರೆಲ್ಲರಿಗೆ ಕರ್ನಾಟಕ ಸಂಸ್ಕೃತಿ–ಪರಂಪರೆ ಮತ್ತು ಹೆಗ್ಗಳಿಕೆಯನ್ನು ಪರಿಚಯಿಸಿಕೊಡಲಾಯಿತು. ದೇಶದ ಮೊದಲ ಸಂಸತ್ತು ‘ಅನುಭವ ಮಂಟಪ’. ಭಾರತದ ಪ್ರಜಾಪ್ರಭುತ್ವದ ತಳಹದಿಯನ್ನು ಕರ್ನಾಟಕದ ವಚನ ಚಳವಳಿಯಿಂದಲೇ ಕಾಣಬಹುದು ಎಂದು ಸಾಕ್ಷ್ಯಚಿತ್ರವು ವಿವರಿಸಿತು.
ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ‘ಸದನಗಳಲ್ಲಿ ನಡೆಯುವ ಕಲಾಪವನ್ನು ಇನ್ನಷ್ಟು ಉತ್ತಮಗೊಳಿಸುವ ಹಾದಿಗಳನ್ನು ಈ ಸಮ್ಮೇಳನದಲ್ಲಿ ಚರ್ಚಿಸುತ್ತೇವೆ’ ಎಂದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ‘ಸದನಗಳು ಇರುವುದು ಚರ್ಚೆ ಮತ್ತು ಸಂವಾದದ ಮೂಲಕ ಜನರ ಕಷ್ಟ, ಸಮಸ್ಯೆ, ಆಗುಹೋಗುಗಳ ಬಗ್ಗೆ ಗಮನಹರಿಸಲು. ಜನಪ್ರತಿನಿಧಿಗಳು ಇದೇ ಹಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಸಭಾಧ್ಯಕ್ಷರ ಮೇಲಿದೆ’ ಎಂದರು.
‘ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಳ್ಳುವ ಮುನ್ನ ಸುದೀರ್ಘವಾದ ಚರ್ಚೆ ನಡೆದಿದೆ. ವಾದ–ಪ್ರತಿವಾದಗಳು, ಸಮ್ಮತಿ–ಅಸಮ್ಮತಿಗಳು ಹಾಗೂ ಅವೆಲ್ಲವನ್ನು ಒಳಗೊಂಡ ಸಮನ್ವಯವಾದದ ರೂಪವಾಗಿ ಸಂವಿಧಾನ ರೂಪುಗೊಂಡಿದೆ. ಸದನ–ಕಲಾಪವನ್ನು ಇನ್ನಷ್ಟು ಉತ್ತಮವಾಗಿ ಹೇಗೆ ನಡೆಸಬಹುದು ಎಂಬುದರ ಸಾಧ್ಯತೆಗಳನ್ನು ಈ ಎರಡು ದಿನಗಳ ಸಮ್ಮೇಳನದಲ್ಲಿ ಪರಿಶೀಲಿಸೋಣ’ ಎಂದು ಕರೆ ನೀಡಿದರು.
ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಬಸವಣ್ಣನ ಕೊಡುಗೆಯನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಪ್ರಸ್ತಾಪಿಸಿದರೆ, ವಿಧಾನ ಪರಿಷತ್ತಿನ ಮಹತ್ವವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ವಿವರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನೀವೆಲ್ಲರೂ ಸಮ್ಮೇಳನದ ನಂತರ ಕೆಲದಿನ ಇಲ್ಲಿಯೇ ಉಳಿಯಬೇಕು. ಕನ್ನಡದ ಸಂಸ್ಕೃತಿ, ಪ್ರಜಾಪ್ರಭುತ್ವದ ಪರಂಪರೆಯನ್ನು ಸ್ವತಃ ಅನುಭವಿಸುವಂತಹ ಪ್ರವಾಸದ ವ್ಯವಸ್ಥೆಯನ್ನು ನಾವು ಮಾಡುತ್ತೇವೆ’ ಎಂದು ಆಹ್ವಾನ ನೀಡಿದರು.
‘ವಿಶ್ವದಾದ್ಯಂತ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ. ಭಾರತವೂ ಅದಕ್ಕೆ ಹೊರತಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ‘ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯಗಳಲ್ಲಿ ಧರ್ಮಾಂಧತೆ ಮೊದಲನೆಯದ್ದು. ಧರ್ಮಾಂಧತೆಯು ಸರ್ವಾಧಿಕಾರಿಯನ್ನು ಸೃಷ್ಟಿಸುತ್ತದೆ. ಸರ್ವಾಧಿಕಾರಿಯು ಭಿನ್ನಾಭಿಪ್ರಾಯ ಮತ್ತು ಅಸಮ್ಮತಿಗಳನ್ನು ಹತ್ತಿಕ್ಕಿ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ದೂಡುತ್ತಾನೆ. ಅಂತಹ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಸರ್ವಾಧಿಕಾರಿಗೆ ಶರಣಾಗಿಬಿಡುತ್ತಾರೆ’ ಎಂದು ವಿವರಿಸಿದರು. ‘ವಿಭಜಕ ರಾಜಕೀಯ ನೀತಿಯಿಂದಲೂ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ. ಜನರನ್ನು ಅವರ ಜಾತಿ–ಧರ್ಮ–ಭಾಷೆಗಳ ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಮಾಡಿಕೊಳ್ಳಲಾಗುತ್ತಿದೆ. ಪ್ರಬಲರಿಗೆ ಮಣೆ ಹಾಕುತ್ತಾ ದುರ್ಬಲರನ್ನು ಸಬಲರನ್ನಾಗಿ ಮಾಡಬೇಕಾದ ಕರ್ತವ್ಯ ಪ್ರಜ್ಞೆ ಪ್ರಜಾಪ್ರಭುತ್ವದಲ್ಲಿ ಮರೆಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.