ADVERTISEMENT

ಕೆರೆ ಕಾಮೇಗೌಡರ ವಿರುದ್ಧ ಗ್ರಾಮಸ್ಥರಿಂದ ದೂರುಗಳ ಸುರಿಮಳೆ

ಕಾಮೇಗೌಡರಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಾಗಿದೆ: ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 8:09 IST
Last Updated 18 ಜುಲೈ 2020, 8:09 IST
ದಾಸನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಶಾಂತಿ ಸಭೆ ನಡೆಯಿತು
ದಾಸನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಶಾಂತಿ ಸಭೆ ನಡೆಯಿತು   

ಮಳವಳ್ಳಿ: ಕಾಮೇಗೌಡರು ಹಾಗೂ ದಾಸನದೊಡ್ಡಿ ಗ್ರಾಮಸ್ಥರ ನಡುವೆ ಉಂಟಾಗಿರುವ ಅಸಮಾಧಾನ ಶಮನಗೊಳಿಸಲು ಶುಕ್ರವಾರ ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಗ್ರಾಮಸ್ಥರು ಕಾಮೇಗೌಡರ ವಿರುದ್ಧ ದೂರುಗಳ ಮಳೆ ಸುರಿಸಿದರು.

ಕಾಮೇಗೌಡರಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಾಗಿದೆ. ಪೊಲೀಸ್ ಠಾಣೆಗೆ ಪದೇ-ಪದೇ ದೂರು ಕೊಡುತ್ತಾರೆ. ಕಟ್ಟೆಗಳಲ್ಲಿ ದನ ಕರು ಮೇಯಿಸಲು, ನೀರು ಕುಡಿಸಲು ಬಿಡುವುದಿಲ್ಲ. ಅಧಿಕಾರಿಗಳಿಗೆ ಪ್ರಭಾವ ಬೀರಿ ತನ್ನಿಷ್ಟದಂತೆ ಕಾರ್ಯಸಾಧಿಸಿಕೊಳ್ಳುತ್ತಾರೆ. ರಸ್ತೆ ಕಾಮಗಾರಿಗೆ ಅಡ್ಡಗಾಲು ಹಾಕುತ್ತಾರೆ. ವಿದ್ಯುತ್ ಕಂಬಗಳ ಕೆಳಗೆ ಗಿಡ ನೆಟ್ಟು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು.

2013-14ರಲ್ಲಿ ಕಾಮೇಗೌಡರು ಮರಳು ದಂಧೆ ನಡೆಸಿದ್ದಾರೆ ಅದಕ್ಕೆ ಸಾಕ್ಷಿಯಾಗಿ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಈಗ ನಮ್ಮ ಮೇಲೆ ಸುಖಾಸುಮ್ಮನೆ ಕ್ರಿಮಿನಲ್ ದೂರು ನೀಡಿ ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಿ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ದಂಪತಿ ಆರೋಪಿಸಿದರು.

ADVERTISEMENT

ಅವರ ಪ್ರಶಸ್ತಿಗಳ ಮೇಲೆ ನಮಗೆ ಯಾವುದೇ ಅಸಮಾಧಾನವಿಲ್ಲ. ಅವರಿಂದ ನಮ್ಮ ಗ್ರಾಮಕ್ಕೆ ಒಳ್ಳೆಯ ಹೆಸರು ಬಂದಿದೆ. ಆದರೆ ಕೆಲವರು ಇಡೀ ದಾಸನದೊಡ್ಡಿ ಗ್ರಾಮವೇ ಅವರ ವಿರುದ್ಧವಿದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿದ್ದಾರೆ ಎಂದರು.

‘ಕಾಮೇಗೌಡರು ತುಂಬಾ ಒರಟು ಮನುಷ್ಯ. ತಮ್ಮದೇ ಕುಟುಂಬದ ಏಳು ಮಂದಿ ತೀರಿಕೊಂಡಾಗಲೂ ಮುಖ ನೋಡಲು ಬರಲಿಲ್ಲ. ಅವರಿಗೆ ಕೋಪ ಹೆಚ್ಚು, ಅವರ ವರ್ತನೆಯಿಂದ ಜನರಿಗೆ ತೊಂದರೆಯಾಗಿರಬಹುದು’ ಎಂದು ಕಾಮೇಗೌಡ ಸಂಬಂಧಿ ತಿಮ್ಮೇಗೌಡ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ.ಇಒ ಬಿ.ಎಸ್.ಸತೀಶ್, ಸರ್ಕಲ್ ಇನ್‌ಸ್ಪೆಕ್ಟರ್‌ ಧನರಾಜ್, ಪಿಎಸ್ಐ ಉಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.