ಬೆಂಗಳೂರು: ‘ಮೋದಿ ಸತ್ತರೆ ಪ್ರಧಾನಿಯಾಗಲು ಯಾರೂ ಇಲ್ಲವೇ ಎಂದಿರುವ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಪ್ರಜ್ವಲ್ ರೇವಣ್ಣ ಕೃಷ್ಣನನ್ನೂ ಮೀರಿಸುವ ಹಂತಕ್ಕೆ ಹೊರಟಿದ್ದಾರೆ’ ಎಂಬ ಅಬಕಾರಿ ಸಚಿವ ತಿಮ್ಮಾಪುರ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.
‘ಇಬ್ಬರ ಹೇಳಿಕೆಗಳು ಕೀಳು ಅಭಿರುಚಿಯಿಂದ ಕೂಡಿವೆ. ಕೆಟ್ಟ ಮನಸ್ಥಿತಿ ಇರುವ ವ್ಯಕ್ತಿಗಳಷ್ಟೇ ಇಂತಹ ಹೇಳಿಕೆ ನೀಡಲು ಸಾಧ್ಯ. ಲೋಕಸಭಾ ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ಕಾಗೆ ಹೇಳಿದ್ದಾರೆ. ಇದು ಮತದಾರರನ್ನು ಬ್ಲ್ಯಾಕ್ ಮೇಲ್ ಮಾಡುವ ತಂತ್ರ. ಸಾರ್ವಜನಿಕರ ತೆರಿಗೆ ಹಣದಿಂದ ಭಾಗ್ಯಗಳನ್ನು ಘೋಷಣೆ ಮಾಡಿ ಚುನಾವಣೆಯಲ್ಲಿ ಮತಕ್ಕಾಗಿ ಜನರನ್ನು ಬೆದರಿಸುವ ಮಟ್ಟಕ್ಕೆ ಕಾಂಗ್ರೆಸ್ ಹೊರಟಿದೆ’ ಎಂದು ಬಿಜೆಪಿಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
‘ಕಾಂಗ್ರೆಸ್ ಪಕ್ಷ ನಾಯಕತ್ವ ಇಲ್ಲದೆ ದಿವಾಳಿಯ ಅಂಚಿನಲ್ಲಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಕಾಂಗ್ರೆಸ್‌ನಲ್ಲಿ ಶಾಸಕರು, ಸಚಿವರು ತಮ್ಮ ಹೇಳಿಕೆಗಳ ಮೂಲಕ ಪ್ರಚಾರಕ್ಕಾಗಿ ಅಡ್ಡ ದಾರಿಯಲ್ಲಿ ಮತ ಕೇಳಲು ಹೊರಟಿದ್ದಾರೆ. ಪ್ರಜ್ವಲ್ ಪ್ರಕರಣ ಮುಂದೆ ಇಟ್ಟುಕೊಂಡು ಸ್ತ್ರೀ ಸಮುದಾಯಕ್ಕೆ ಅವಮಾನವಾಗುವ ರೀತಿಯ ಹೇಳಿಕೆ ಕೊಡುತ್ತಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.