ADVERTISEMENT

ಮಂಡ್ಯ | ಮಾರಮ್ಮ ದೇಗುಲ ಪ್ರವೇಶ: ದಲಿತರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
ಕಾರಿನ ಗಾಜು ಒಡೆದಿರುವ ದೃಶ್ಯ 
ಕಾರಿನ ಗಾಜು ಒಡೆದಿರುವ ದೃಶ್ಯ    

ಮಂಡ್ಯ: ತಾಲ್ಲೂಕಿನ ಎಲೆಚಾಕನಹಳ್ಳಿಯ ಮಾರಮ್ಮ ದೇವಸ್ಥಾನ ಪ್ರವೇಶದ ವಿಚಾರದಲ್ಲಿ ಸವರ್ಣೀಯ ಮತ್ತು ದಲಿತ ಸಮುದಾಯಗಳ ನಡುವೆ ಸಂಘರ್ಷ ನಡೆದಿದ್ದು, ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ದೇವಾಲಯಕ್ಕೆ ಸರ್ಕಾರಿ ಅಧಿಕಾರಿಗಳು ಒಂದು ಬೀಗ ಜಡಿದಿದ್ದರೆ, ಗ್ರಾಮಸ್ಥರು ಮತ್ತೊಂದು ಬೀಗ ಹಾಕಿದ್ದಾರೆ. ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ದೇವಾಲಯದಲ್ಲಿ ದಲಿತರು ಪೂಜೆ ಸಲ್ಲಿಸಿದರೆಂಬ ಕಾರಣಕ್ಕೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಗ್ರಾಮದಲ್ಲಿ ಶಾಂತಿ ಸಭೆಯನ್ನೂ ನಡೆಸಲಾಗಿತ್ತು. ‘ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಬಿಡುವುದಿಲ್ಲ’ ಎಂದು ಸವರ್ಣೀಯರು ಸಭೆಯನ್ನು ಬಹಿಷ್ಕರಿಸಿ ಎದ್ದು ಹೋಗಿದ್ದರು. 

ADVERTISEMENT

‘ದೇವಾಲಯಕ್ಕೆ ನಮಗೂ ಪ್ರವೇಶ ನೀಡಿ’ ಎಂದು ದಲಿತರು ಒತ್ತಾಯಿಸಿದ್ದು, ‘ಪ್ರವೇಶ ನೀಡುವುದಿಲ್ಲ’ ಎಂದು ಸವರ್ಣೀಯರು ಪಟ್ಟು ಹಿಡಿದಿದ್ದಾರೆ. ‘ಅಧಿಕಾರಿಗಳ ಎದುರಿಗೇ ನಮ್ಮನ್ನು ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ’ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ಎಫ್‌ಐಆರ್‌ ದಾಖಲು: ‘ಜೂನ್‌ 3ರಂದು ಮಧ್ಯರಾತ್ರಿ 12.30ರ ಸಂದರ್ಭದಲ್ಲಿ ಗ್ರಾಮದ ದಲಿತ ಸಮುದಾಯದ ವಿಜಯಕುಮಾರ್ ಎಂಬುವರ ಕಾರಿನ ಗಾಜನ್ನು ಒಡೆದಿದ್ದು, ಜಾತಿ ನಿಂದನೆ ಮಾಡಿದ್ದಾರೆ’ ಎಂದು ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಿವಲಿಂಗ ಬಿನ್ ಕರಿಗೌಡ ಅಲಿಯಾಸ್ ಪಾಪು, ದಿನೇಶ್ ಬಿನ್ ಮಾದೇಗೌಡ, ಜನಾರ್ದನ ಬಿನ್ ತಿಮ್ಮೆಗೌಡ, ಚೇತನ್ ಕುಮಾರ್ ಬಿನ್ ಪುಟ್ಟಸ್ವಾಮಿ, ರೂಪೇಶ ಬಿನ್ ಚಿಕ್ಕಣ್ಣ ಹಾಗೂ ಮನು ಬಿನ್ ಮಾದೇಗೌಡ ಸೇರಿದಂತೆ ಇತರರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಎಲೆಚಾಕನಹಳ್ಳಿಗೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಿದ್ದು ಜೂನ್‌ 9ರಂದು ಶಾಸಕರು ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು
– ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.