ADVERTISEMENT

ತುಳು ಸಾಹಿತ್ಯ ಅಕಾಡೆಮಿ ಆಯ್ಕೆಯಲ್ಲಿ ಲೋಪ: ಪುಸ್ತಕ ಬಹುಮಾನ ‘ಗೌರವ’ಕ್ಕೆ ಸೀಮಿತ

ವಿಕ್ರಂ ಕಾಂತಿಕೆರೆ
Published 3 ಸೆಪ್ಟೆಂಬರ್ 2022, 19:45 IST
Last Updated 3 ಸೆಪ್ಟೆಂಬರ್ 2022, 19:45 IST
ದಯಾನಂದ ಕತ್ತಲ್‌ಸಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ದಯಾನಂದ ಕತ್ತಲ್‌ಸಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ   

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ಈ ಬಾರಿಯ ಪುಸ್ತಕ ಬಹುಮಾನಕ್ಕೆ ಕೃತಿಯನ್ನು ಆಯ್ಕೆ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಬಹುಮಾನವನ್ನು ರದ್ದುಮಾಡಲಾಗಿದೆ. ಆಯ್ಕೆ ಮಾಡಿರುವ ಅಶೋಕ್‌ ಆಳ್ವ ಸುರತ್ಕಲ್‌ ಅವರ ‘ತುಳುನಾಡಿನ ಪ್ರಾಣಿ ಜಾನಪದ’ ಕೃತಿ ‘ಅನರ್ಹ’ ಎಂದು ತಡವಾಗಿ ಗಮನಕ್ಕೆ ಬಂದ ಕಾರಣ ಬಹುಮಾನದ ಬದಲು ಕೃತಿಕಾರನಿಗೆ ‘ಗೌರವ’ ಮಾತ್ರ ನೀಡಲು ಅಕಾಡೆಮಿ ನಿರ್ಧರಿಸಿದೆ.

ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಮತ್ತು ವಿವಿಧ ಪುರಸ್ಕಾರಗಳಿಗೆ ಆಯ್ಕೆಯಾದವರ ಪಟ್ಟಿಯನ್ನು ಜುಲೈ 21ರಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಪ್ರಕಟಿಸಿದ್ದರು. ಆಗಸ್ಟ್ 21ರಂದು ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಘೋಷಿಸಿದ್ದರು. ಆಯ್ಕೆಯಲ್ಲಿ ಆಗಿರುವ ಗೊಂದಲದಿಂದಾಗಿ ಕಾರ್ಯಕ್ರಮವನ್ನು ಸೆ. 24ಕ್ಕೆ ಮುಂದೂಡಲಾಗಿದೆ.

ಪುಸ್ತಕ ಬಹುಮಾನದ ಆಯ್ಕೆಗಾಗಿ ಒಟ್ಟು ಮೂರು ಕೃತಿಗಳು ಬಂದಿದ್ದವು. ತುಳುನಾಡಿನ ಪ್ರಾಣಿ ಜಾನಪದಕ್ಕೆ ಸಂಬಂಧಿಸಿದ ಕೃತಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದು ಪಿಎಚ್‌.ಡಿ ಪದವಿಗಾಗಿ ಅಧ್ಯಯನ ನಡೆಸಿದ ಕೃತಿ ಎಂದು ಅಕಾಡೆಮಿಗೆ ತಡವಾಗಿ ಗಮನಕ್ಕೆ ಬಂದಿದೆ. ಅಕಾಡೆಮಿಯ ನಿಯಮಾವಳಿಗಳ ಪ್ರಕಾರ ಪಿಎಚ್‌.ಡಿಗಾಗಿ ಅಧ್ಯಯನ ನಡೆಸಿದ ಕೃತಿಯನ್ನು ಪ್ರಶಸ್ತಿ ಆಯ್ಕೆಗೆ ಪರಿಗಣಿಸುವಂತೆ ಇಲ್ಲ.

ADVERTISEMENT

‘ಪಿಎಚ್‌.ಡಿಗಾಗಿ ಅಧ್ಯಯನ ಮಾಡಿರುವ ಕೃತಿಗಳಿಗೆ ಪ್ರಶಸ್ತಿ ಕೊಟ್ಟ ಉದಾಹರಣೆ ಇವೆ. ಆದರೂ ನಿಯಮಾವಳಿಗಳನ್ನು ಮೀರಿ ಯಾವುದನ್ನೂ ಮಾಡಬಾರದು ಎಂಬ ನಿಲುವಿಗೆ ಅಕಾಡೆಮಿ ಈಗ ಬದ್ಧವಾಗಿರುವುದರಿಂದ ಬಹುಮಾನವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಆದರೆ ಕೃತಿಕಾರನಿಗೆ ಅಗೌರವ ತೋರುವುದು ಸರಿಯಲ್ಲ ಎಂಬ ಕಾರಣಕ್ಕೆ ಬಹುಮಾನದ ಬದಲು ಗೌರವ ನೀಡಲು ನಿರ್ಧರಿಸಲಾಗಿದೆ’ ಎಂದು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿಎಚ್‌.ಡಿಗಾಗಿ ಅಧ್ಯಯನ ನಡೆಸಿದ ಕೃತಿಯಲ್ಲಿ ಶೇಕಡಾ 40ರಷ್ಟು ಬದಲಾವಣೆ ಮಾಡಿ ಪ್ರಕಟಿಸಿದರೆ ಪ್ರಶಸ್ತಿಗೆ ಪರಿಗಣಿಸಬಹುದು. ಈ ಬಾರಿ ಆಯ್ಕೆ ಮಾಡಿರುವ ಕೃತಿಯನ್ನು 25 ವರ್ಷಗಳ ನಂತರ ಬದಲಾವಣೆ ಮಾಡಿ ಪ್ರಕಟಿಸಲಾಗಿದೆ. ಆದರೂ ಗೊಂದಲಕ್ಕೆ ಆಸ್ಪದ ಬೇಡ ಎಂಬ ಕಾರಣದಿಂದ ಬಹುಮಾನ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಹೊಸದಾಗಿ ಆಯ್ಕೆ ಮಾಡುವ ಯೋಚನೆ ಇತ್ತು. ಆದರೆ ಆಯ್ಕೆಗೆ ಬಂದಿದ್ದ ಮೂರು ಕೃತಿಗಳ ಪೈಕಿ ಒಂದನ್ನು ಕೈಬಿಟ್ಟ ನಂತರ ಉಳಿದ ಎರಡು ಕೃತಿಗಳನ್ನು ಮಾತ್ರ ಪರಿಗಣಿಸಲು ನಿಯಮಾವಳಿಗಳಲ್ಲಿ ಅಕವಾಶವಿಲ್ಲ’ ಎಂದು ಕತ್ತಲ್‌ಸಾರ್ ವಿವರಿಸಿದರು.

ಗೌರವಕ್ಕೂ ಪ್ರಾಯೋಜಕತ್ವ
ಈ ಬಾರಿ ಗೌರವ ಪ್ರಶಸ್ತಿಗೆ ಮೂವರನ್ನು, ಪುಸ್ತಕ ಪ್ರಕಾಶನದಲ್ಲಿ ಕವನ, ನಾಟಕ ಮತ್ತು ಅಧ್ಯಯನ ವಿಭಾಗದಲ್ಲಿ ತಲಾ ಒಬ್ಬರನ್ನು, ಬಾಲ ಪ್ರತಿಭೆ, ಯುವ ಸಾಧಕ ವಿಭಾಗದಲ್ಲಿ ತಲಾ ಮೂವರನ್ನು, ಮಾಧ್ಯಮ ಪುರಸ್ಕಾರಕ್ಕೆ ಇಬ್ಬರನ್ನು ಮತ್ತು ಸಂಘಟನೆ ವಿಭಾಗದಲ್ಲಿ ಮೂರು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಹೊರತುಪಡಿಸಿದರೆ ಉಳಿದ ಎಲ್ಲ ಬಹುಮಾನಗಳನ್ನು ಪ್ರಾಯೋಜಕರಿಂದ ನೀಡಲಾಗುತ್ತದೆ. ಅಧ್ಯಯನ ವಿಭಾಗದ ಆಯ್ಕೆಯಲ್ಲಿ ಲೋಪ ಆಗಿರುವುದರಿಂದ ಗೌರವವನ್ನು ಕೂಡ ಪ್ರಾಯೋಜಕತ್ವದ ಮೂಲಕ ನೀಡಲು ಅಕಾಡೆಮಿ ನಿರ್ಧರಿಸಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

*
ಬೇರೆಯವರ ಅಚಾತುರ್ಯದಿಂದ ಈ ತಪ್ಪು ಆಗಿದೆ. ಆದರೆ ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಂಡಿದ್ದೇನೆ.
-ದಯಾನಂದ ಕತ್ತಲ್‌ಸಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ

*
ನನ್ನದು ಸಂಶೋಧನಾ ಕೃತಿ. ಸಮಾಜಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ವರ್ಷಗಳ ನಂತರ ಪ್ರಕಟಿಸಿದ್ದೇನೆ. ಪ್ರಶಸ್ತಿಗಾಗಿ ಬರೆದದ್ದಲ್ಲ. ಆದ್ದರಿಂದ ಅಕಾಡೆಮಿ ನಿರ್ಧಾರದ ಬಗ್ಗೆ ಬೇಸರವೂ ಇಲ್ಲ.
-ಅಶೋಕ್‌ ಆಳ್ವ ಸುರತ್ಕಲ್‌, ಕೃತಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.