ADVERTISEMENT

ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್‌: ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 20:18 IST
Last Updated 6 ಆಗಸ್ಟ್ 2022, 20:18 IST
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ   

ಬೆಂಗಳೂರು: ಬಿಬಿಎಂಪಿ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿರುವ ಕಾಂಗ್ರೆಸ್‌ ಪಕ್ಷ, ವಾರ್ಡ್‌ ಮರುವಿಂಡಣೆ ಮತ್ತು ಮೀಸಲಾತಿ ವಿಚಾರದಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾರ್ಡ್‌ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿಯಲ್ಲಿ ಕಾನೂನು ಉಲ್ಲಂಘನೆ ನಡೆದಿದ್ದರೆ ಕಾಂಗ್ರೆಸ್‌ ಮುಖಂಡರು ಕಾನೂನಿನ ಪ್ರಕಾರವೇ ಪ್ರಶ್ನಿಸಬೇಕಿತ್ತು. ತಕರಾರು ಸಲ್ಲಿಸಲು ಅವಕಾಶವಿತ್ತು. ಆದರೆ, ಚುನಾವಣೆಯಲ್ಲಿ ಸೋಲುವ ಭಯದಿಂದ ನಗರಾಭಿವೃದ್ಧಿ ಇಲಾಖೆ ಕಚೇರಿಯಲ್ಲಿ ತಮ್ಮ ಗೂಂಡಾಗಿರಿ ಸಂಸ್ಕೃತಿ ಪ್ರದರ್ಶಿಸಿದ್ದಾರೆ’ ಎಂದರು.

’ಬಿಬಿಎಂಪಿ ಚುನಾವಣೆ ನಡೆಸಲು ಬಿಜೆಪಿ ಸರ್ಕಾರ ಸಿದ್ಧವಾಗಿದೆ. ಈ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಕಾಂಗ್ರೆಸ್‌ ನಾಯಕರು ಕಾನೂನಿನ ಅರಿವಿಲ್ಲದವರಂತೆ ಮಾತನಾಡುತ್ತಿದ್ದಾರೆ. ರಾಮಲಿಂಗಾ ರೆಡ್ಡಿ, ದಿನೇಶ್‌ ಗುಂಡೂರಾವ್‌, ಜಮೀರ್‌ ಅಹಮ್ಮದ್‌ ಖಾನ್‌ ಮತ್ತಿತರರು ಮುಸ್ಲಿಂ ಮಹಿಳೆಯರಿಗೆ ವಾರ್ಡ್‌ಗಳನ್ನು ಮೀಸಲಿರಿಸಿರುವುದನ್ನು ಆಕ್ಷೇಪಿಸಿದ್ದಾರೆ. ಮುಸ್ಲಿಂ ಮಹಿಳೆಯರು ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗುವುದು ತಪ್ಪೆ‘ ಎಂದು ಪ್ರಶ್ನಿಸಿದರು.

ADVERTISEMENT

243 ವಾರ್ಡ್‌ಗಳನ್ನು ರಚಿಸಿ, ಅದಕ್ಕೆ ಸಮನಾಗಿ ಮೀಸಲಾತಿ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಶೇಕಡ 50ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಶೇ 50ರಷ್ಟು ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಒಟ್ಟು ಸ್ಥಾನಗಳಲ್ಲಿ ಶೇ 50ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ತಪ್ಪುಗಳು ಕಂಡುಬಂದರೆ ಕಾನೂನಿನ ಪ್ರಕಾರವೇ ಪ್ರಶ್ನಿಸಲಿ ಎಂದು ಸವಾಲು ಹಾಕಿದರು.

‘ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳು ಇರಬಹುದು. ಅವುಗಳೆಲ್ಲವನ್ನೂ ಪರಿಹರಿಸಿಕೊಂಡು ಚುನಾವಣೆಯಲ್ಲಿ ಜಯ ಗಳಿಸುತ್ತೇವೆ. ಕಾಂಗ್ರೆಸ್‌ ಎಲ್ಲ ಕಡೆಗಳಲ್ಲೂ ನೆಲೆ ಕಳೆದುಕೊಳ್ಳುತ್ತಾರೆ’ ಎಂದು ಹೇಳಿದರು.

ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಎಂ. ಸತೀಶ್‌ ರೆಡ್ಡಿ ಮಾತನಾಡಿ, ‘ಜಮೀರ್‌, ದಿನೇಶ್‌ ಗುಂಡೂರಾವ್‌ ಅವರು 2015ರಲ್ಲಿ ಮಹಿಳಾ ಮೀಸಲಾತಿ ಕುರಿತು ಆಕ್ಷೇಪ ಎತ್ತಿರಲಿಲ್ಲ. ಈಗ ಏಕೆ ಆ ಪ್ರಶ್ನೆ ಎತ್ತಿದ್ದಾರೆ? ಚುನಾವಣೆ ಮುಂದೂಡುವ ಕಾರ್ಯಸೂಚಿಯ ಭಾಗವಾಗಿ ಕಾಂಗ್ರೆಸ್‌ ಮುಖಂಡರು ಈ ರೀತಿ ಮಾಡುತ್ತಿದ್ದಾರೆ’ ಎಂದು ದೂರಿದರು.‌

ವಿಧಾನಪರಿಷತ್ ಸದಸ್ಯ ಎನ್‌. ರವಿಕುಮಾರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.