ADVERTISEMENT

ಒಕ್ಕಲಿಗ, ಲಿಂಗಾಯತ ಮಠಗಳ ಮೇಲೆ ಆರ್‌ಎಸ್‌ಎಸ್‌, ಬಿಜೆಪಿಗೆ ದ್ವೇಷ: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2022, 13:02 IST
Last Updated 8 ಜೂನ್ 2022, 13:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ ಕುರಿತ ವಿವರಗಳನ್ನು ಮರು ಪರಿಷ್ಕರಣೆ ಮಾಡುವಾಗ ಒಂದೇ ವಾಕ್ಯಕ್ಕೆ ಸೀಮಿತಗೊಳಿಸಿದ್ದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಒಕ್ಕಲಿಗ, ಲಿಂಗಾಯತ ಮಠಗಳ ಮೇಲೆ ಆರ್‌ಎಸ್ಎಸ್‌ ಮತ್ತು ಬಿಜೆಪಿಗೆ ಅಪರಿಮಿತ ದ್ವೇಷವಿರುವುದು ಈ ಮೂಲಕ ಅನಾವರಣಗೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

'ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ. ಆದಿಚುಂಚನಗಿರಿ, ಸಿದ್ಧಗಂಗಾ, ಸಿರಿಗೆರೆ, ಕರಳಬಾಳು, ಮುರುಘಾಮಠಗಳ ಅನ್ನ, ಅಕ್ಷರ ದಾಸೋಹದ ಬಗೆಗಿನ ಪಠ್ಯ ಕಡಿತಗೊಳಿಸಿ ಒಂದೇ ವಾಕ್ಯಕ್ಕೆ ಸೀಮಿತಗೊಳಿಸಿದ್ದೇಕೆ? ಅಕ್ಷರಗಳು ಭಾರವಾದವೇ?' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ADVERTISEMENT

'ಪ್ರಜಾವಾಣಿ'ಯಲ್ಲಿ ಪ್ರಕಟಗೊಂಡಿರುವ 'ಸ್ವಾಮೀಜಿಗಳ ಮಾಹಿತಿಗೂ ಕತ್ತರಿ' ಶೀರ್ಷಿಕೆಯ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಪಠ್ಯಪರಿಷ್ಕರಣೆ ಮಾಡಿದಾಗ 6 ನೇ ತರಗತಿಯ ಸಮಾಜವಿಜ್ಞಾನ ಭಾಗ 1ರಲ್ಲಿ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಸ್ವಾಮೀಜಿಗಳ ಕೊಡುಗೆಗಳ ಬಗ್ಗೆ ವಿವರಣೆಯನ್ನು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.