ADVERTISEMENT

ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ: ಲಂಚದ ಪಟ್ಟಿ ಕೊಟ್ಟ ಕಾಂಗ್ರೆಸ್‌

ವಿಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 19:31 IST
Last Updated 13 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ವಿರೋಧ ಪಕ್ಷ ಕಾಂಗ್ರೆಸ್‌, ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಲಂಚದ ದರಪಟ್ಟಿ (ರೇಟ್‌ ಕಾರ್ಡ್‌) ಮತ್ತು ಭ್ರಷ್ಟಾಚಾರದ ವಿವಿಧ ಸ್ವರೂಪಗಳ ಚಿತ್ರಣ ನೀಡುವ ವಿಡಿಯೊ ತುಣುಕುಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಶೇಕಡ 40ರಷ್ಟು ಕಮಿಷನ್‌ ಆರೋಪವನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಅಭಿಯಾನವೊಂದನ್ನು ನಡೆಸಲು ರಾಜ್ಯ ಕಾಂಗ್ರೆಸ್‌ ಸಜ್ಜಾಗಿದೆ. ಅದಕ್ಕೆ ಪೂರಕವಾಗಿ ದರಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಹಗರಣಗಳ ಪಟ್ಟಿಯನ್ನೂ ನೀಡಿದೆ. ವಿವಿಧ ಹುದ್ದೆಗಳಿಗೆ ನೇಮಕಾತಿ ಹಾಗೂ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆಯೂ ಲಂಚದ ದರಪಟ್ಟಿ ಪ್ರಕಟಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್‌, ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್, ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ, ಉಪಾಧ್ಯಕ್ಷ ಮನ್ಸೂರ್‌ ಅಲಿಖಾನ್‌ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಭಿಯಾನಕ್ಕೆ ಸಿದ್ಧಪಡಿಸಿರುವ ‘ಲಂಚದ ದರಪಟ್ಟಿ’ಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

ADVERTISEMENT

ಈ ವೇಳೆ ಮಾತನಾಡಿದ ಶಿವಕುಮಾರ್‌, ‘ಈ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯದ ಮಾನ ಹರಾಜಾಗುತ್ತಿದೆ. ಗುತ್ತಿಗೆದಾರರಿಂದ ಶೇಕಡ 40ರಷ್ಟು ಕಮಿಷನ್‌ ಪಡೆದರೆ, ಮಠಗಳಿಗೆ ಅನುದಾನ ನೀಡುವುದಕ್ಕೂ ಶೇ 30ರಷ್ಟು ಕಮಿಷನ್‌ ಪಡೆಯುತ್ತಿರುವ ಆರೋಪವಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟವೂ ಭ್ರಷ್ಟಾಚಾರದ ಆರೋಪ ಮಾಡಿದೆ. ಆದರೆ, ಎಲ್ಲವನ್ನೂ ಮುಚ್ಚಿಹಾಕಲಾಗುತ್ತಿದೆ’ ಎಂದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯ ಅಕ್ರಮಗಳ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಮುಖಂಡರು ಧಮಕಿ ಹಾಕುತ್ತಾರೆ. ಅಧಿಕಾರ ಅವರ ಬಳಿಯೇ ಇದೆ. ಯಾವ ತನಿಖೆ ಬೇಕಿದ್ದರೂ ನಡೆಸಲಿ. ಬಿಜೆಪಿ ಸರ್ಕಾರದ ಲಂಚದ ಪಟ್ಟಿಯನ್ನೂ ನೀಡುತ್ತೇವೆ. ಆ ಬಗ್ಗೆಯೂ ತನಿಖೆ ನಡೆಯಲಿ’ ಎಂದು ಆಗ್ರಹಿಸಿದರು.

‘40 ಪರ್ಸೆಂಟ್‌ ಸರ್ಕಾರ’: ‘ಈಗ ರಾಜ್ಯದಲ್ಲಿರುವುದು 40 ‍ಪರ್ಸೆಂಟ್ ಸರ್ಕಾರ. ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂಬ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದೇ ವಿಚಾರ ಮುಂದಿಟ್ಟುಕೊಂಡು ಜನರ ಬಳಿ ತೆರಳುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

ಅಭಿಯಾನಕ್ಕೆ ಸಜ್ಜು

ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅಭಿಯಾನ ನಡೆಸುವುದಕ್ಕಾಗಿ ಡಿಜಿಟಲ್‌ ಸಂವಹನ ಮಾಧ್ಯಮಗಳನ್ನು ಬಳಸಿಕೊಳ್ಳಲು ಕೆಪಿಸಿಸಿ ಮುಂದಾಗಿದೆ. ಇದಕ್ಕಾಗಿ ಮೊಬೈಲ್‌ ಸಂಖ್ಯೆ 8447704040ರ ಸಹಾಯವಾಣಿ ಆರಂಭಿಸಲಾಗಿದೆ. ವಾಟ್ಸ್‌ಆ್ಯಪ್‌ ಮೂಲಕವೂ ಮಾಹಿತಿ ಹಂಚಿಕೊಳ್ಳಬಹುದು. www.40percentsarkaara.com ಎಂಬ ವೆಬ್‌ಸೈಟ್‌ ರೂಪಿಸಿದ್ದು, ಅಲ್ಲಿಯೂ ಮಾಹಿತಿ ನೀಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಧ್ವನಿ ಎತ್ತಿದರೆ ಐ.ಟಿ, ಇ.ಡಿ ದಾಳಿ’

‘ಇದೇ ಬಿಜೆಪಿ ಸರ್ಕಾರದಲ್ಲಿ ಹಿಂದೆ ‘ವಿಜಯೇಂದ್ರ ತೆರಿಗೆ’ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿತ್ತು. ಶಾಸಕನೂ ಅಲ್ಲದ, ಬಿಜೆಪಿ ಪದಾಧಿಕಾರಿಯೊಬ್ಬ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್‌ ಮುಖಂಡರ ಮೇಲೆ ಆದಾಯ ತೆರಿಗೆ (ಐ.ಟಿ), ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ದಾಳಿ ಮಾಡಿಸಲಾಗಿತ್ತು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.

‘ಬೆಂಗಳೂರಿನಲ್ಲಿ ಪ್ರವಾಹದಿಂದಾಗಿರುವ ಸಮಸ್ಯೆ ನಿವಾರಣೆಯಲ್ಲಿ ಸರ್ಕಾರದ ವೈಫಲ್ಯದ ಕುರಿತು ಉದ್ಯಮಿಯೊಬ್ಬರು ಇತ್ತೀಚೆಗೆ ಧ್ವನಿ ಎತ್ತಿದ್ದರು. ಮರುದಿನವೇ ಅವರ ಒಡೆತನದ ಸಂಸ್ಥೆಗಳ ಮೇಲೆ ಐ.ಟಿ ದಾಳಿ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.