ADVERTISEMENT

ಆಪರೇಷನ್‌: ಹಸ್ತ–ಕಮಲ ಸಿದ್ಧ, ಪಕ್ಷ ಬದಲಿಸುವ ಹಕ್ಕಿಗಳಿಗೆ ಬರಲಿದೆ ಭಾರಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 2:08 IST
Last Updated 6 ಜನವರಿ 2023, 2:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶತಾಯಗತಾಯ ಅಧಿಕಾರ ಹಿಡಿಯಬೇಕೆಂಬ ಛಲ ತೊಟ್ಟಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು, ತಮ್ಮ ವಿರೋಧಿ ಪಾಳಯದ ಶಾಸಕರು, ಪ್ರಭಾವಿ ನಾಯಕರನ್ನು ಸೆಳೆಯಲು ತಂತ್ರ ಹೆಣೆದಿದ್ದಾರೆ. ತಮ್ಮ ಶಕ್ತಿ ಕಡಿಮೆ ಇರುವ ಕ್ಷೇತ್ರಗಳಲ್ಲಿ ವಿರೋಧಿ ಪಕ್ಷಗಳಲ್ಲಿರುವ ಗೆಲ್ಲುವ ‘ಸಮರ್ಥ’ರನ್ನು ಕರೆತಂದು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿವೆ. ಇದಕ್ಕಾಗಿ ಆಪರೇಷನ್ ನಿಪುಣರನ್ನೂ ನಿಯೋಜಿಸಲಾಗಿದೆ.

ಶಾಸಕರ ಪಟ್ಟಿ ಕೊಟ್ಟ ಬೊಮ್ಮಾಯಿ?

ರಾಜ್ಯದ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಲ ಇಲ್ಲವೋ ಅಂತಹ ಕ್ಷೇತ್ರಗಳಲ್ಲಿರುವ ಕಾಂಗ್ರೆಸ್‌–ಜೆಡಿಎಸ್‌ನ ಪ್ರಭಾವಿಗಳನ್ನು ಕಮಲದ ತೆಕ್ಕೆಗೆ ತರಲು ಸಿದ್ಧತೆ ನಡೆದಿದ್ದು, ಅಂತಹವರ ಪಟ್ಟಿಯೊಂದನ್ನು ಪಕ್ಷದ ವರಿಷ್ಠರು ಸಿದ್ಧಪಡಿಸಿದ್ದಾರೆ.

ADVERTISEMENT

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸೇರ ಬಯಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಾಲಿ ಮತ್ತು ಮಾಜಿ ಶಾಸಕರ ಪಟ್ಟಿಯೊಂದನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಿದ್ದು, ಪಟ್ಟಿಯನ್ನು ಪಡೆದ ಶಾ ಅವರು ಎಲ್ಲರ ಬಗ್ಗೆಯೂ ಮಾಹಿತಿ ಪಡೆದು ಮುಂದೇನು ಮಾಡಬೇಕು ಎಂಬುದನ್ನು ತಾವೇ ತೀರ್ಮಾನಿಸುವುದಾಗಿ ಹೇಳಿದ್ದರೆನ್ನಲಾಗಿದೆ.

ಅನ್ಯ ಪಕ್ಷಗಳಿಂದ ಬಿಜೆಪಿ ಸೇರ್ಪಡೆ ಪರ್ವ ಈಗಾಗಲೇ ಆರಂಭ ವಾಗಿದ್ದು, ಬಜೆಟ್‌ ಅಧಿವೇಶನದ ಬಳಿಕ ಸೇರ್ಪಡೆ ಮತ್ತಷ್ಟು ಬಿರುಸು ಗೊಳ್ಳಲಿದೆ. ಈಗಾಗಲೇ ಕಾಂಗ್ರೆಸ್‌ನ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ನಟ ಶಶಿಕುಮಾರ್‌, ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಚ್‌.ಅನಿಲ್‌ ಕುಮಾರ್‌, ಕೆಪಿಸಿಸಿ ಮಾಜಿ ಸದಸ್ಯ ಎಸ್‌. ಸಚ್ಚಿದಾನಂದ ಮತ್ತು ಅವರ ಬೆಂಬಲಿಗರು ಬಿಜೆಪಿ ಸೇರಿದ್ದಾರೆ. ಹಳೇಮೈಸೂರು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಈ ಜಿಲ್ಲೆಗಳಲ್ಲಿ ‘ಆಪರೇಷನ್‌’ಗೆ ಬಿಜೆಪಿ ಗಮನ ಕೇಂದ್ರೀಕರಿಸಿದೆ.

ಸಂಕ್ರಮಣಕ್ಕೆ ‘ಕೈ’ ಕ್ರಾಂತಿ

ಕಾಂಗ್ರೆಸ್‌ ಪಕ್ಷದಲ್ಲಿ ಸಂಕ್ರಮಣದ ಬಳಿಕ ‘ಆಪರೇಷನ್‌ ಹಸ್ತ’ದ ದಾಳ ಉರುಳಿಸಲು ಆ ಪಕ್ಷದ ನಾಯಕರು ತೆರೆಮರೆಯಲ್ಲಿ ಯತ್ನ ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೇ ಈ ಸುಳಿವು ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ಎಲ್ಲ ದಾರಿಗಳನ್ನು ಮುಕ್ತವಾಗಿ ಇರಿಸಿಕೊಂಡಿರುವ ‘ಕೈ’ ನಾಯಕರು, ಬಿಜೆಪಿ– ಜೆಡಿಎಸ್‌ ಶಾಸಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ. ಈಗಾಗಲೇ ಕೆಲವು ಶಾಸಕರ ಜೊತೆ ಈ ಬಗ್ಗೆ ಮಾತುಕತೆಯೂ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ‘ಕಾಂಗ್ರೆಸ್‌ಗೆ ಯಾರೆಲ್ಲಾ ಬರುತ್ತಾರೆ ಎಂಬುದನ್ನು ಈಗ ಹೇಳುವುದಿಲ್ಲ. ಅದೆಲ್ಲವೂ ಸಂಕ್ರಾಂತಿ ವೇಳೆಗೆ ಗೊತ್ತಾಗಲಿದೆ’ ಎಂದಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಹಟ ತೊಟ್ಟಿರುವ ಕಾಂಗ್ರೆಸ್‌ ನಾಯಕರು, ‘ಆಪರೇಷನ್ ಹಸ್ತ’ಕ್ಕೆ ಚಾಲನೆ ನೀಡಿದ್ದು, ಬೆಂಗಳೂರಿನ ಇಬ್ಬರು, ಮುಂಬೈ ಕರ್ನಾಟಕ ಭಾಗದ ಇಬ್ಬರು, ಮೈಸೂರು ಭಾಗದ ಒಬ್ಬರು, ಕಲಬುರಗಿಯ ಒಬ್ಬರ ಜೊತೆ ಈಗಾಗಲೇ ಚರ್ಚೆ ನಡೆಸಿರುವ ಮಾಹಿತಿ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.