ADVERTISEMENT

ಖರೀದಿ ಅಕ್ರಮ: ಕೈ–ಕಮಲ ಜಟಾಪಟಿ, ‘ಲೆಕ್ಕ ಕೊಡಿ’ ಅಭಿಯಾನ ಶುರುಮಾಡಿದ ಕಾಂಗ್ರೆಸ್

ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು l ಸರ್ಕಾರದ ಬೆಂಬಲಕ್ಕೆ ನಿಂತ ಮೂವರು ಸಚಿವರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 19:32 IST
Last Updated 11 ಜುಲೈ 2020, 19:32 IST
ಪಿಪಿಇ ಕಿಟ್ (ಸಾಂದರ್ಭಿಕ ಚಿತ್ರ)
ಪಿಪಿಇ ಕಿಟ್ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕೋವಿಡ್‍-19 ಪರಿಸ್ಥಿತಿ ಎದುರಿಸಲು ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತಂತೆ ಕಾಂಗ್ರೆಸ್‌ ‘ಲೆಕ್ಕಕೊಡಿ’ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಬಿಜೆಪಿಯ ಸಚಿವರು ಕಾಂಗ್ರೆಸ್‍ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಖರೀದಿ ಕುರಿತಂತೆ ಶನಿವಾರ ‘ಲೆಕ್ಕಕೊಡಿ’ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚಾಲನೆ ನೀಡಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರಕ್ಕೆ 6 ಪ್ರಶ್ನೆಗಳನ್ನು ಕೇಳಿದ್ದಾರೆ. ಇತ್ತ ಸಚಿವ ಶ್ರೀರಾಮುಲು, ‘ದಾಖಲೆಗಳಿದ್ದರೆ ಬಹಿರಂಗಪಡಿಸಲಿ, ಶಕ್ತಿಯಿದ್ದರೆ ಜೈಲಿಗೂ ಕಳುಹಿಸಲಿ’ ಎಂದು ಸಿದ್ದರಾಮಯ್ಯ ಅವರಿಗೆ ಸವಾಲೆಸೆದಿದ್ದರೆ, ಇನ್ನೊಂದೆಡೆ, ‘ಕಾಂಗ್ರೆಸ್ ಹಗರಣಗಳನ್ನೂ ಬಿಚ್ಚಿಡುವೆ’ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಸರ್ಕಾರಕ್ಕೆ 6 ಪ್ರಶ್ನೆಗಳನ್ನು ಕೇಳಿದ ಸಿದ್ದರಾಮಯ್ಯ

ಬೆಂಗಳೂರು: ‘ಕೊರೊನಾ ನಿಯಂತ್ರಣಕ್ಕಾಗಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ‘#ಲೆಕ್ಕ ಕೊಡಿ’ ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ‌ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಭಿಯಾನ ಆರಂಭಿಸಿದೆ.

ADVERTISEMENT

ಈ ಬಗ್ಗೆ ಟ್ವೀಟ್‌ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪಕ್ಷದ ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ವಿಡಿಯೊ ಮಾಡಿ, ಶೇರ್ ಮಾಡುವ ಮೂಲಕ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದು ವಿನಂತಿಸಿದ್ದಾರೆ.

‘ರಾಜ್ಯದ ಜನರು ಲೆಕ್ಕ ಕೇಳುತ್ತಿದ್ದಾರೆ. ಲೆಕ್ಕ ಕೇಳುವುದು ಜನರ ಹಕ್ಕು, ಲೆಕ್ಕ ಕೊಡುವುದು ಸರ್ಕಾರದ ಕರ್ತವ್ಯ’ ಎಂದಿರುವ ಸಿದ್ದರಾಮಯ್ಯ, ಆರು ಪ್ರಶ್ನೆಗಳನ್ನು ಯೂಟ್ಯೂಬ್, ಫೇಸ್‌ಬುಕ್‌, ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

‘ಕೊರೊನಾ ಸೋಂಕು ಬಂದಾಗಿನಿಂದ ಇದುವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿರುವ ಹಣ ಎಷ್ಟು. ಕೇಂದ್ರ ಸರ್ಕಾರ ಎಷ್ಟು ನೀಡಿದೆ. ಯಾವ ಯಾವ ಇಲಾಖೆ, ಯಾವ ಯಾವ ಬಾಬ್ತಿಗೆ ಎಷ್ಟು ಹಣ ಖರ್ಚು ಮಾಡಿದೆ?

ಪಿಪಿಇ ಕಿಟ್‌, ಟೆಸ್ಟ್‌ ಕಿಟ್‌, ಗ್ಲೋವ್‌, ಸಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್, ಕಿಯೋಸ್ಕ್‌ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು. ನೀವು ಪ್ರತಿಯೊಂದನ್ನೂ ಯಾವ್ಯಾವ ದರದಲ್ಲಿ ಖರೀದಿಸಿದ್ದೀರಿ. ಯಾವ್ಯಾವ ಕಂಪನಿಗಳಿಂದ ಖರೀದಿಸಿದ್ದೀರಿ?

ಈವರೆಗೆ ಫುಡ್ ಕಿಟ್‌, ಫುಡ್ ಪ್ಯಾಕೇಜ್ ಎಷ್ಟು ಕೊಟ್ಟಿದ್ದೀರಿ. ಯಾರಿಗೆ ಕೊಟ್ಟಿದ್ದೀರಿ. ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ? ಆಹಾರ ತಯಾರಿಸಿ ಕೊಟ್ಟವರು ಯಾರು, ತಾಲ್ಲೂಕುವಾರು, ವಾರ್ಡ್‌ವಾರು ಲೆಕ್ಕ ಕೊಡಿ?

ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಫುಡ್‌ ಕಿಟ್‌ ಕೊಟ್ಟಿದ್ದೀರಿ. ಏನೇನು ಕೊಟ್ಟಿದ್ದೀರಿ. ಪ್ರತಿ ಕಿಟ್‌ಗೆ ಖರ್ಚಾದ ಹಣ ಎಷ್ಟು?

ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ– ರಾಜ್ಯ ಘೋಷಿಸಿದ ಪ್ಯಾಕೇಜ್‌ಗಳು ಯಾವುವು? ಯಾವ ವೃತ್ತಿಯವರಿಗೆ, ಯಾವ್ಯಾವ ಸಮುದಾಯದವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ?

ಕೊರೊನಾ ಸಂಕಷ್ಟದಲ್ಲಿರುವವರ ಆರೈಕೆಗೆ ಎಷ್ಟು ಖರ್ಚು ಮಾಡಿದ್ದೀರಿ?’

***

ಕಾಂಗ್ರೆಸ್‌ನವರು ಲೆಕ್ಕಕೊಡಿ ಅಭಿಯಾನ ಮಾಡುವುದಕ್ಕಿಂತ ಜಾಗೃತಿ ಅಭಿಯಾನ ಮಾಡಿದರೆ ಒಳ್ಳೆಯದು. ರಾಜಕೀಯ ಸುಳ್ಳು ಆರೋಪ ಬಿಟ್ಟು ಕಾಂಗ್ರೆಸ್ ಕೂಡ ನಮ್ಮ ಜೊತೆಗೆ ಕೈಜೋಡಿಸಬೇಕು

- ಬಿ.ಸಿ.ಪಾಟೀಲ, ಕೃಷಿ ಸಚಿವ

***

‘ದಾಖಲೆಯಿದ್ದರೆ ಬಹಿರಂಗಪಡಿಸಲಿ, ಶಕ್ತಿಯಿದ್ದರೆ ಜೈಲಿಗೆ ಕಳುಹಿಸಲಿ’

ನಾಯಕನಹಟ್ಟಿ: ‘ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ₹ 2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಲಿ. ಅವರಿಗೆ ಶಕ್ತಿ ಇದ್ದರೆ ತಪ್ಪಿತಸ್ಥರನ್ನು ಜೈಲಿಗೂ ಕಳುಹಿಸಲಿ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸವಾಲು ಹಾಕಿದರು.

‘ಕೊರೊನಾ ಸೋಂಕು ನಿರ್ವಹಣೆಗೆ ಇಲ್ಲಿಯವರೆಗೆ ರಾಜ್ಯ ಸರ್ಕಾರ ₹ 500 ಕೋಟಿಯಿಂದ ₹ 600 ಕೋಟಿ ವೆಚ್ಚದಲ್ಲಿ ಆರೋಗ್ಯ ಸಲಕರಣೆಗಳನ್ನು ಖರೀದಿಸಿದೆ. ಸಿದ್ದರಾಮಯ್ಯ ತಮ್ಮ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಲು ಅವರು ಸ್ವತಂತ್ರರು’ ಎಂದು ಸಚಿವರು ನಾಯಕನಹಟ್ಟಿಯಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಮನುಷ್ಯತ್ವ ಇರುವ ಯಾರೂ ದುಡ್ಡು ಹೊಡೆಯಲ್ಲ’

ಮೈಸೂರು: ಕೋವಿಡ್‌ ಸನ್ನಿವೇಶದಲ್ಲಿ, ಮನುಷ್ಯತ್ವ ಇರುವ ಯಾರೂ ದುಡ್ಡು ಹೊಡೆಯುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಶನಿವಾರ ಇಲ್ಲಿ ಹೇಳಿದರು.

‘ಸಿದ್ದರಾಮಯ್ಯ ಅವರು ಮೈಸೂರಿನ ತೋಟದ ಮನೆಯಲ್ಲಿ ಕುಳಿತು ಆರೋಪ ಮಾಡುವುದು ಸರಿಯಲ್ಲ. ವಿಧಾನಸೌಧಕ್ಕೆ ಬಂದು ದಾಖಲೆ ಪರಿಶೀಲಿಸಲಿ’ ಎಂದು ತಿರುಗೇಟು ನೀಡಿದರು.

ಆರಂಭದಲ್ಲಿ ಕೋವಿಡ್‌ ಪರಿಕರಗಳ ಬೆಲೆ ಹೆಚ್ಚಿತ್ತು. ಈಗ ಸ್ಪರ್ಧೆ ಇರುವ ಕಾರಣ ದರ ಕಡಿಮೆಯಾಗಿದೆ. ‌ರಾಜ್ಯದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ಮಾಹಿತಿ ಇರುತ್ತದೆ ಎಂದರು. ‘ಕೋವಿಡ್‌ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಸಾರ್ವಜನಿಕರ ಮುಂದಿಡಲು ನಮ್ಮ ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷದ ನಾಯಕರೂ ಕೇಳಬಹುದು’ ಎಂದು ಹೇಳಿದರು.

‘ಕಳೆದ ನಾಲ್ಕೈದು ತಿಂಗಳಿನಿಂದ ಕೋವಿಡ್‌–19 ನಿರ್ವಹಣೆಗಾಗಿ ರಾಜ್ಯ ಸರ್ಕಾರ ಖರ್ಚು ಮಾಡಿರುವುದು ₹ 554 ಕೋಟಿ. ಆದರೆ, ಸಿದ್ದರಾಮಯ್ಯ ಅವರು ₹ 2,300 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಅದು ಹೇಗೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.