ADVERTISEMENT

ಸಚಿವರಿಗೆ ‘ಬಹಿಷ್ಕಾರ’ದ ಮುಜುಗರ

ವಿಧಾನ ಮಂಡಲದಲ್ಲಿ ಬಿಜೆಪಿ– ಕಾಂಗ್ರೆಸ್‌ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 20:11 IST
Last Updated 16 ಮಾರ್ಚ್ 2021, 20:11 IST
   

ಬೆಂಗಳೂರು: ಸಿ.ಡಿ ವಿಚಾರದಲ್ಲಿ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿರುವ ಸಚಿವರಿಗೆ ಪ್ರಶ್ನೆ ಕೇಳಲು ನಿರಾಕರಿಸುವ ಕಾಂಗ್ರೆಸ್‌ ನಿರ್ಧಾರ ಮಂಗಳವಾರವೂ ವಿಧಾನಮಂಡದಲ್ಲಿ ಗದ್ದಲಕ್ಕೆ ಕಾರಣವಾಯಿತು.

ವಿಧಾನಸಭೆಯಲ್ಲಿ ತೀವ್ರ ವಾಕ್ಸಮರ ನಡೆದರೆ, ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಮಧ್ಯದಲ್ಲೇ ಒಮ್ಮೆ ಕಲಾಪ ಮುಂದೂಡಿಕೆಯಾಯಿತು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದ ಕುರಿತು ಕಾಂಗ್ರೆಸ್‌ನ ಪಿ.ಟಿ.ಪರಮೇಶ್ವರ ನಾಯ್ಕ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗೆ ಕೇಳಿದ್ದ ಪ್ರಶ್ನೆಯನ್ನು ಯೋಜನಾ ಸಚಿವರಿಗೆ ವರ್ಗಾಯಿಸಲಾಗಿತ್ತು. ಸಚಿವ ನಾರಾಯಣ ಗೌಡ ಉತ್ತರ ನೀಡಲು ಮುಂದಾದರು. ಆಗ ‘ಸಚಿವರ ಉತ್ತರ ಬೇಕಿಲ್ಲ’ ಎಂದು ಪರಮೇಶ್ವರ ನಾಯ್ಕ್ ಹೇಳಿದರು. ‘ನಾನೇನೂ ತಪ್ಪು ಮಾಡಿಲ್ಲ’ ಎಂದು ನಾರಾಯಣ ಗೌಡ ಸಮರ್ಥಿಸಿಕೊಂಡರು. ‘ಉತ್ತರ ಬೇಕಿಲ್ಲದಿದ್ದರೆ ಕೇಳಬೇಡಿ’ ಎಂದು ಕಾಗೇರಿ ಹೇಳಿದರು.

ADVERTISEMENT

ಆಗ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘ರಾಸಲೀಲೆ ನಡೆಸಿದವರು ಕಾಂಗ್ರೆಸ್‌ನಲ್ಲೇ ಇದ್ದಾರೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಪರಮೇಶ್ವರ ನಾಯ್ಕ್ ಅವರ ಬಗ್ಗೆಯೂ ಈ ಹಿಂದೆ ಆರೋಪ ಬಂದಿತ್ತಲ್ಲ’ ಎಂದರು.

ಇದಕ್ಕೆ ಪರಮೇಶ್ವರ ನಾಯ್ಕ್‌ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎಸ್‌.ಆರ್‌.ವಿಶ್ವನಾಥ್‌ ಹಾಗೂ ಹಲವು ಸದಸ್ಯರು, ‘ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

ಈ ವೇಳೆ ಕಾಗೇರಿ ಅವರು ಪರಮೇಶ್ವರ ನಾಯ್ಕ್‌ ಅವರಿಗೆ ಕುಳಿತುಕೊಳ್ಳಲು ಸೂಚಿಸಿದರು. ಅದಕ್ಕೆ ನಾಯ್ಕ್ ಒಪ್ಪಲಿಲ್ಲ. ಆಗ ಕಾಗೇರಿ ಎದ್ದು ನಿಂತು, ‘ನೀವು ಸೌಜನ್ಯ ಮೀರಿ ವರ್ತಿಸುತ್ತಿದ್ದೀರಿ. ಹುಡುಗಾಟಿಕೆ ಆಡುತ್ತಿದ್ದೀರಿ. ಇಂತಹ ವರ್ತನೆ ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದರು.

ಪರಿಷತ್‌ನಲ್ಲಿ ಧರಣಿ

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ‘ನೈತಿಕತೆ’ಯ ಕಾರಣ ನೀಡಿ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಗೆ ಪ್ರಶ್ನೆ ಕೇಳುವುದನ್ನು ಬಹಿಷ್ಕರಿಸುವುದಾಗಿ ಹೇಳಿದರು.

ರಮೇಶ್‌ ನಿಲುವನ್ನು ವಿರೋಧಿಸಿದ ಬಿಜೆಪಿ ಸದಸ್ಯರು, ಉಪ ಪ್ರಶ್ನೆ ಕೇಳಲು ಅವಕಾಶ ಕೋರಿದರು. ‘ಪ್ರಶ್ನೆಯನ್ನು ಬಹಿಷ್ಕರಿಸಲು ನಿಯಮಗಳಲ್ಲಿ ಅವಕಾಶವಿಲ್ಲ’ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಹೇಳಿದರು. ಪ್ರಶ್ನೆ ಬಹಿಷ್ಕರಿಸುವುದು ದಾಖಲಾಗಬೇಕು ಎಂದು ಪಟ್ಟು ಹಿಡಿದ ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಎದುರು ಧರಣಿ ಆರಂಭಿಸಿದರು. ಅದರ ನಡುವೆಯೇ ಬಿಜೆಪಿಯ ಸುನೀಲ್‌ ಸುಬ್ರಮಣಿ ಉಪ ಪ್ರಶ್ನೆ ಕೇಳಿದರು.

ಗದ್ದಲ ಜೋರಾಗುತ್ತಿದ್ದಂತೆ ಹತ್ತು ನಿಮಿಷ ಕಲಾಪ ಮುಂದೂಡಿದ ಉಪ ಸಭಾಪತಿ, ಎರಡೂ ಪಕ್ಷಗಳ ನಾಯಕರನ್ನು ಸಂಧಾನಕ್ಕಾಗಿ ತಮ್ಮ ಕೊಠಡಿಗೆ ಆಹ್ವಾನಿಸಿದರು. ಸಂಧಾನ ಸಭೆಯಲ್ಲಿ ಪ್ರಶ್ನೆ ಕೇಳದಿರುವ ಕಾಂಗ್ರೆಸ್‌ ನಿಲುವನ್ನು ಬಿಜೆಪಿ ಒಪ್ಪಿಕೊಂಡಿತು. ಕಲಾಪ ಆರಂಭವಾಗುತ್ತಿದ್ದಂತೆ, ಈ ನಿರ್ಧಾರ ಪ್ರಕಟಿಸಲಾಯಿತು. ಕಾಂಗ್ರೆಸ್‌ ಸದಸ್ಯರು ಧರಣಿ ಹಿಂಪಡೆದರು.

ಹೋದ ಮಾನ ಮರಳಿ ಬರುತ್ತಾ?

‘ನಮ್ಮ ಸಿ.ಡಿ ಇದೆ ಎಂದು ನ್ಯಾಯಾಲಯಕ್ಕೆ ಹೋಗಿಲ್ಲ. ನಕಲಿ ಸಿ.ಡಿ ತಯಾರಿಸಿ ತೇಜೋವಧೆ ಮಾಡುವ ಷಡ್ಯಂತ್ರದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಒಂದು ವೇಳೆ ನಕಲಿ ಸಿ.ಡಿ ಬಿಡುಗಡೆ ಮಾಡಿ ಮಾನ ಹೋದರೆ ಮರಳಿ ಬರುತ್ತಾ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಪ್ರಶ್ನಿಸಿದರು. ‘ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಎಚ್‌.ವೈ. ಮೇಟಿ ವಿರುದ್ಧವೂ ಸಿ.ಡಿ ಬಿಡುಗಡೆ ಆಗಿತ್ತು. ಅವರು ಸಚಿವ ಸ್ಥಾನ ಕಳೆದುಕೊಂಡರು. ಮರ್ಯಾದೆಯೂ ಹೋಯಿತು. ಆದರೆ, ತನಿಖೆ ಆದಾಗ ಅದು ನಕಲಿ ಸಿ.ಡಿ ಎಂಬ ವರದಿ ಬಂತು. ಹೋದ ಮಾನ ಮರಳಿ ಬರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.