ADVERTISEMENT

ಆರ್‌ಆರ್ ನಗರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಪರಿಚಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 10:09 IST
Last Updated 7 ಅಕ್ಟೋಬರ್ 2020, 10:09 IST
ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ .ಎಚ್
ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ .ಎಚ್   

ಬೆಂಗಳೂರು: ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಪಕ್ಷಾಂತರಗೊಂಡು ಮರಳಿ ಕಾಂಗ್ರೆಸ್‌ ಸೇರಿರುವ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ, ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ.

ಮುನಿರತ್ನ ಅವರ ರಾಜೀನಾಮೆ ಬಳಿಕ ತೆರವಾಗಿದ್ದ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕುಸುಮಾ ಅವರ ಹೆಸರನ್ನು ಘೋಷಿಸಲಾಗಿದೆ.

ಗುತ್ತಿಗೆದಾರರಾಗಿರುವ ಹನುಮಂತರಾಯಪ್ಪ ಬಹಳ ವರ್ಷ ಕಾಂಗ್ರೆಸ್‍ನಲ್ಲಿದ್ದವರು. ಡಿ.ಕೆ. ಶಿವಕುಮಾರ್‌ ಕುಟುಂಬಕ್ಕೆ ಆಪ್ತರು. ನಗರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ 2008 ಮತ್ತು 2013ರಲ್ಲಿ ಪಕ್ಷ ತೊರೆದು ಜೆಡಿಎಸ್‌ ಸೇರಿದ್ದರು. ಇದೀಗ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಬಂದಿದ್ದಾರೆ.

ADVERTISEMENT

1989 ಜೂನ್‌ 6ರಂದು ಹುಟ್ಟಿರುವ ಕುಸುಮಾ, ಪೋಷಕರ ಜೊತೆ ಸದ್ಯ ಬೆಂಗಳೂರಿನ ಮಲ್ಲತ್ತಹಳ್ಳಿ ಬಡಾವಣೆಯಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ವಿದ್ಯಾನಿಕೇತನ್‌ ಪಬ್ಲಿಕ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ರಾಜಾಜಿನಗರದ ಕೆಎಲ್‌ಇ ಕಾಲೇಜಿನಲ್ಲಿ ಪಿಯುಸಿ, 2010ರಲ್ಲಿ ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯಿಂದ ಬಿಇ (ಕಂಪ್ಯೂಟರ್‌ ಸೈನ್ಸ್) ಮುಗಿಸಿದ್ದಾರೆ. ಅವರು 2018ರಲ್ಲಿ ಬೋಸ್ಟನ್‌ ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂ.ಎಸ್‌ ಮುಗಿಸಿದ್ದಾರೆ. 2019–20ರಲ್ಲಿ ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕುಸುಮಾ ಕೆಲಸ ಮಾಡಿದ್ದಾರೆ.

ಐಎಎಸ್‌ ಅಧಿಕಾರಿಯಾಗಿದ್ದ ಪತಿ ಡಿ.ಕೆ. ರವಿ ನಿಧನದ ಬಳಿಕ ಕುಸುಮಾ, ಎಂಎಸ್‌ ಮುಗಿಸಿದ್ದಾರೆ. ಆರ್‌.ಆರ್‌. ನಗರ ಕ್ಷೇತ್ರದಿಂದ ಹನುಮಂತರಾಯಪ್ಪ ಅವರೇ ಅಭ್ಯರ್ಥಿಯಾಗಲು ಬಯಸಿದ್ದರು. ಆದರೆ, ಕಾಂಗ್ರೆಸ್ ನಾಯಕರ ಸಲಹೆ ಮೇರೆಗೆ ಕುಸುಮಾ ಅವರನ್ನು ಕಣಕ್ಕಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.