ADVERTISEMENT

ವಿಶ್ವನಾಥ್‌ಗೆ ಹಣ ಸಂದಾಯ ಎಸಿಬಿಗೆ ಕಾಂಗ್ರೆಸ್‌ ದೂರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 19:45 IST
Last Updated 3 ಡಿಸೆಂಬರ್ 2020, 19:45 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಬೆಂಗಳೂರು:‘ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತಮಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದೊಡ್ಡ ಮೊತ್ತದ ಹಣ ಕಳುಹಿಸಿಕೊಟ್ಟಿದ್ದರು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ನೀಡಿರುವ ಹೇಳಿಕೆ ಕುರಿತು ತನಿಖೆ ನಡೆಸುವಂತೆ ಕಾಂಗ್ರೆಸ್‌ ಮುಖಂಡರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಿದ್ದಾರೆ.

‘ಉಪ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿಯವರು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌. ಸಂತೋಷ್‌ ಮೂಲಕ ₹ 25 ಕೋಟಿ ಹಣವನ್ನು ವಿಶ್ವನಾಥ್‌ ಅವರಿಗೆ ಕಳುಹಿಸಿರುವುದು ಹೇಳಿಕೆಯಿಂದ ಬಯಲಾಗಿದೆ. ಭ್ರಷ್ಟಾಚಾರದ ಮೂಲಕ ಸಂಗ್ರಹಿಸಿದ ಹಣವನ್ನು ಚುನಾವಣೆಗಾಗಿ ಕಳುಹಿಸಿರುತ್ತಾರೆ. ಈ ಪ್ರಕರಣದಲ್ಲಿ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆದಿದೆ’ ಎಂದು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ವೈ.ಪುಟ್ಟರಾಜು ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿಯವರಿಗೆ ಬುಧವಾರ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಯೋಗೇಶ್ವರ್‌, ಎನ್‌.ಆರ್‌. ಸಂತೋಷ್‌ ಮತ್ತಿತರರು ಭಾಗಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.